ಕೂಗು ನಿಮ್ಮದು ಧ್ವನಿ ನಮ್ಮದು

ಕೋಲಾರ: ಕಲ್ಲಂಗಡಿ ಹಣ್ಣು ಬೆಳೆದು ಕೈ ಸುಟ್ಟುಕೊಂಡ ರೈತ, ಕಳಪೆ ಬಿತ್ತನೆಬೀಜ ಕಾರಣವಾಯಿತಂತೆ

ಕೋಲಾರದಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆದು ಈ ಬಾರಿಯಾದರೂ ಉತ್ತಮ ಆದಾಯ ಗಳಿಸುವ ನೀರಿಕ್ಷೆಯಲ್ಲಿದ್ದ ರೈತರಿಗೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೋಲಾರ: ತಾಲೂಕಿನ ಕಮ್ಮಸಂದ್ರ ಗ್ರಾಮದ ವೆಂಕಟರಾಮೇಗೌಡ ಕಲ್ಲಂಗಡಿ ಹಣ್ಣನ್ನು ಬೆಳೆದು ಕೈ ಸುಟ್ಟು ಕೊಂಡಿದ್ದಾರೆ. ಯೂನೈಟೆಡ್ ಜಿನರಿಕ್ ಕಂಪನಿಂದ ಬೀಜವನ್ನು ಖರೀದಿ ಮಾಡಿಕೊಂಡು ಬಂದಿರುವ ರೈತ ಸುಮಾರು 3 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದಾರೆ. ಹಣ್ಣು ಬೆಳೆಯಲು ಮನೆಯಲ್ಲಿದ್ದ ಚಿನ್ನದೊಡವೆಯನ್ನು ಸಹ ಮಾರಿದ್ದು, ಬೆಳೆಗಾಗಿ ರೈತ ಸುಮಾರು 5 ಲಕ್ಷ ರೂ ಖರ್ಚು ಮಾಡಿ ನಾಲ್ಕು ತಿಂಗಳು ಕಾಲ ಶ್ರಮ ವಹಿಸಿ ಕಷ್ಟಪಟ್ಟು ಕಾಡು ಪ್ರಾಣಿಗಳಿಂದ ಕಾಪಾಡಿಕೊಂಡು ಬಂದಿದ್ದಾರೆ. ಬೇಸಿಗೆಯಲ್ಲಿ ಕನಿಷ್ಠ ಒಂದು ಹಣ್ಣು ಕೆ.ಜಿ 10 ರೂ.ಗಳಿಗೆ ಮಾರಾಟವಾದರೂ ಸಹ ಸುಮಾರು 10 ಲಕ್ಷ ಹಣ ಬರಬೇಕು.

ಆದರೆ ವಾತಾವರಣದ ಪ್ರಭಾವವೋ ಅಥವಾ ನಕಲಿ ಬಿತ್ತನೆ ಬೀಜದ ಪರಿಣಾಮವೋ ಗೊತ್ತಿಲ್ಲ. ಕಲ್ಲಂಗಡಿ ಹಣ್ಣನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಮಾರಾಟಗಾರರು ಹಣ್ಣನ್ನು ನೋಡಿ ಬೇಡವೆಂದು ಹೋಗಿದ್ದಾರೆ. ಹಣ್ಣು ಸಂಪೂರ್ಣ ಟೋಳ್ಳಿನಂತ್ತಾಗಿದ್ದು, ಸಂಪೂರ್ಣ ಕಳಪೆಯಾಗಿದೆ. ಇನ್ನು ಈ ಹಣ್ಣಿಗೆ ಮಾರುಕಟ್ಟೆಯಲ್ಲೂ ಬೆಲೆ ಇಲ್ಲದೇ, ಮಾರಾಟ ಮಾಡಲು ಆಗದೇ ಇತ್ತ ಕಷ್ಟಪಟ್ಟು ಬೆಳೆದ ಬೆಳೆಗೆ ಹಣವು ಇಲ್ಲದೆ ರೈತ ಕಣ್ಣೀರು ಹಾಕುವಂತಾಗಿದೆ.

ಇನ್ನು ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ಸಹ ರೈತರು ಸಂಕಷ್ಟದಿಂದ ಹೊರಬರಲು ಆಗಿಲ್ಲ. ಕಷ್ಟಪಟ್ಟು ಬೆಳೆದ ಕಲ್ಲಂಗಡಿ ಸಂಪೂರ್ಣ ಹಾಳಾಗಿದೆ. ರೈತ ಹಾಕಿದ ಹಣವೂ ವಾಪಾಸು ಸಿಗುತ್ತಿಲ್ಲ. ಹಣ್ಣು ಸಮೃದ್ದಿಯಾಗಿ ಬೆಳದಿದ್ದರೂ ಸಹ ಹಣ್ಣು ಸಂಪೂರ್ಣ ಟೊಳ್ಳಿನಿಂದ ಕೂಡಿದೆ. ಹೀಗಾಗಿ ಬೇಸಿಗೆಯಲ್ಲಿ ಒಂದಿಷ್ಟು ಹಣ ನೋಡಬಹುದೆಂದು ಆಸೆ ಇಟ್ಟುಕೊಂಡು ಕಾದಿದ್ದ ರೈತರೀಗ ಕಳಪೆ ಬಿತ್ತನೆ ಬೀಜಗಳಿಗೆ ಮೋಸ ಹೋದಂತಾಗಿದೆ.

ಕೋಲಾರ ತಾಲೂಕು ಒಂದರಲ್ಲಿಯೇ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದಾರೆ. ಅದರಲ್ಲಿ ಬಹುತೇಕ ಎಲ್ಲಾ ಕಲ್ಲಂಗಡಿ ಬೆಳೆಯೂ ಹಾಳಾಗಿದ್ದು ಇದು ಕಳಪೆ ಬಿತ್ತನೆ ಬೀಜದ ಎಫೆಕ್ಟ್ ಎನ್ನುವುದು ರೈತ ಮುಖಂಡರುಗಳ ಆರೋಪವಾಗಿದೆ.

ಈ ಕುರಿತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಕೊಡಿಸುವ ಪ್ರಯತ್ನವಾದರೂ ಮಾಡಬೇಕು ಎನ್ನುವುದು ರೈತ ಮುಖಂಡರ ಆಗ್ರಹವಾಗಿದೆ. ಒಟ್ಟಿನಲ್ಲಿ ಕಳಪೆ ಬಿತ್ತನೆ ಬೀಜದ ಹಾವಳಿಗೆ ಚಿನ್ನದ ನಾಡಿನ ರೈತರು ಕಂಗಾಲಾಗಿದ್ದಾರೆ. ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಕಲ್ಲಂಗಡಿ ಸಂಪೂರ್ಣ ಹಾಳಾಗಿದ್ದು . ಇದನ್ನು ನಂಬಿಕೊಂಡು ಸಾಲಸೋಲ ಮಾಡಿ ಹಲವಾರು ನಿರೀಕ್ಷೆಗಳನ್ನಿಟ್ಟುಕೊಂಡು ಬೆಳೆದಿದ್ದ ರೈತರು ಈಗ ದಿಕ್ಕು ದೋಚದಂತಾಗಿರೋದಂತೂ ಸುಳ್ಳಲ್ಲ.

error: Content is protected !!