ದಾವಣಗೆರೆ: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಲೆಕ್ಕಾಧಿಕಾರಿ ಮಾಡಾಳ್ ಪ್ರಶಾಂತ್ ಅವರು ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಬೆನ್ನಲ್ಲೇ ಅವರ ತಂದೆ, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿವಾಸದಲ್ಲಿಯೂ ಶೋಧ ಕಾರ್ಯ ನಡೆದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿರುವ ನಿವಾಸದಲ್ಲಿ ಕಂತೆ ಕಂತೆ ಹಣ, ಚಿನ್ನಾಭರಣ ದೊರೆತಿದೆ. 500, 200, 100 ರೂ. ಮುಖ ಬೆಲೆಯ ನೋಟುಗಳ ಕಂತೆಗಳು ಪತ್ತೆಯಾಗಿದ್ದು, ಲೊಕಾಯುಕ್ತ ಅಧಿಕಾರಿಗಳು ಎಣಿಕೆ ಮಾಡುತ್ತಿದ್ದಾರೆ. ಮನೆಯಲ್ಲಿರುವ ಪ್ರತಿ ಕಬೋರ್ಡ್ ಅನ್ನೂ ಅಧಿಕಾರಿಗಳು ಶೋಧ ಮಾಡಿದ್ದಾರೆ.
ಈ ಮಧ್ಯೆ, ಶಾಸಕರ ಮನೆಗೆ ಗುರುವಾರ ರಾತ್ರಿ ಯಾರಾದರೂ ಬಂದು ಹೋಗಿದ್ದಾರೆಯೇ ಎಂಬ ಕುರಿತಾಗಿ ಸಿಸಿಟಿವಿ ಮೂಲಕ ಹೆಚ್ಚಿನ ಪರಿಶೀಲನೆ ನಡೆಸಲು ಲೋಕಾಯುಕ್ತ ಮುಂದಾಗಿದ್ದು, ವಿಶೇಷ ತಂಡವನ್ನು ಕರೆಸಿಕೊಳ್ಳಲಾಗಿದೆ.
ಪ್ರಶಾಂತ್ ಅವರ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಮತ್ತು ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಶೋಧ ಕಾರ್ಯ ಕೊನೆಗೊಂಡಿತ್ತು. ಕೋಟ್ಯಂತರ ರೂ. ನಗದು ಮತ್ತು ಅನೇಕ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಅವರ ತಂದೆ, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ದಾವಣಗೆರೆ ನಿವಾಸದಲ್ಲಿಯೂ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಪತ್ತೆಯಾಗಿದೆ.
ಕೆಎಸ್ಡಿಎಲ್ ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಪ್ರಶಾಂತ್ ವಿರುದಗ್ಧ ಖಾಸಗಿ ವ್ಯಕ್ತಿ ಗುರುವಾರ ಬೆಳಿಗ್ಗೆ ದೂರು ನೀಡಿದ್ದರು. ಅದರ ಆಧಾರದಲ್ಲಿ ಎಫ್ಐಆರ್ ದಾಖಲಿಸಿ ದಾಳಿ ನಡೆಸಿದೆವು. ಕ್ರೆಸೆಂಟ್ ರಸ್ತೆ ಕಚೇರಿಯಲ್ಲಿ 40 ಲಕ್ಷ ರೂ. ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದರು ಎಂದು ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ಗುರುವಾರ ತಿಳಿಸಿದ್ದರು