ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೈಕ್ಲೋನ್ ಥರ ರಾಜ್ಯಕ್ಕೆ ಬರುತ್ತಿದ್ದಾರೆ. ಆದರೆ ಬರುವ ಮೊದಲು ಅವರು ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡಲಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕಿಡಿಕಾರಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಧಾನಿ ಮೋದಿಗೆ ಸುದ್ದಿಗೋಷ್ಟಿ ನಡೆಸುವ ಧೈರ್ಯ ಕೂಡ ಇಲ್ಲ. ಕರ್ನಾಟಕದ ಹಲವು ಮೂಲಭೂತ ಸಮಸ್ಯೆಗಳಿವೆ. ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಪೀಠದಲ್ಲಿ ಇತ್ಯರ್ಥವಾಗಿ ಹಲವು ವರ್ಷಗಳಾಗಿದೆ. ಆದರೆ ಈವರೆಗೆ ಕೇಂದ್ರ ಸರ್ಕಾರ ಇದರ ಬಗ್ಗೆ ಅಧಿಸೂಚನೆ ಹೊರಡಿಸಿಲ್ಲ. ನೋಟಿಫಿಕೇಶನ್ ಮಾಡದೇ ಕರ್ನಾಟಕವನ್ನ ಕೇಂದ್ರ ಸರ್ಕಾರ ಸತಾಯಿಸುತ್ತಿದೆ. ಜನರು ಮೋದಿ ಮತ್ತು ಅಮಿತ್ ಶಾ ಬಂದಾಗ ಇದನ್ನ ಕೇಳಬೇಕು ಎಂದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರೂ ಭ್ರಷ್ಟರು 40% ಭ್ರಷ್ಟಾಚಾರ ರಾಜ್ಯದ ಬಿಜೆಪಿಯಲ್ಲಿ ದೊಡ್ಡ ಮಟ್ಟದಲ್ಲಿ ನಡೀತಾ ಇದೆ. ನಾವು ಶಾಸಕರಾಗಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಲ್ಲಿ ಭ್ರಷ್ಟಾಚಾರ ಇರಲಿಲ್ಲ. ಆದರೆ ಇದೀಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರೂ ಭ್ರಷ್ಟರಾಗಿದ್ದಾರೆ. ಮೊನ್ನೆ ಮಾಡಾಲ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಬಯಲಾಗಿದೆ. 1980ರಲ್ಲಿ ನಾನು ಸೋಪ್ ಫ್ಯಾಕ್ಟರಿ ಆಧುನಿಕರಣ ಮಾಡಿ ಉಳಿಸಿದ್ದೆ. ಆದರೆ ಇದೀಗ ಆ ಸೋಪ್ ಪ್ಯಾಕ್ಟರಿ ದರೋಡೆ ಮಾಡಲು ಇಳಿದಿದ್ದಾರೆ. ಸದ್ಯ ಎಂಎಲ್ಎ ಸಿಕ್ಕಿಲ್ಲ, ಅವರು ಸಿಗಲ್ಲ ಅನ್ನೋದು ಕೂಡ ಸ್ಪಷ್ಟ. ಅಮಿತ್ ಶಾ ಇಲ್ಲಿಗೆ ಬಂದು ನಿಮಗೆ ಅಬ್ಬಕ್ಕ ಬೇಕಾ ಟಿಪ್ಪು ಬೇಕಾ ಅಂತಾರೆ. ಅಮಿತ್ ಶಾಗೆ ಇತಿಹಾಸದ ಸಾಮಾನ್ಯ ಜ್ಞಾನವಿಲ್ಲ ಎಂದು ಹಿರಿಹಾಯ್ದರು.
ಅಮಿತ್ ಶಾಗೆ ಇತಿಹಾಸದ ಪ್ರಜ್ಞೆ ಇಲ್ಲ
ಅಬ್ಬಕ್ಕನ ಸೈನಿಕರು ಬ್ಯಾರಿಗಳು ಮತ್ತು ಮೊಗವೀರರು. ಅಬ್ಬಕ್ಕ ಪೋರ್ಚುಗೀಸರನ್ನ ಓಡಿಸಲು ಇವರ ಸೈನ್ಯ ನೆರವಾಗಿತ್ತು. ಇತಿಹಾಸದಲ್ಲಿ ಈ ಸೈನ್ಯದ ಬಗ್ಗೆ ಉಲ್ಲೇಖವಿದೆ. ಅಮಿತ್ ಶಾಗೆ ಇತಿಹಾಸದ ಪ್ರಜ್ಞೆ ಇಲ್ಲ. ಕಾಂಗ್ರೆಸ್ ಅವಧಿಯಲ್ಲಿ ಮಂಗಳೂರಿನ ಕ್ಯಾಂಪ್ಕೋ ಸ್ಥಾಪನೆಯಾಗಿದ್ದು. ಆದರೆ ಈಗ ಬಿಜೆಪಿ ಅದನ್ನ ಹೈಜ್ಯಾಕ್ ಮಾಡಿ ಓನರ್ ಶಿಪ್ ತೆಗೊಳೋದಕ್ಕೆ ಯತ್ನಿಸುತ್ತಿದೆ. ಉಪ್ಪಿನಂಗಡಿ ಹತ್ತಿರ ಒಂದು ದೇವಸ್ಥಾನದ ನವೀಕರಣಕ್ಕೆ ಆರು ಕೋಟಿ ಎಸ್ಟಿಮೇಟ್ ಮೇಟ್ ಮಾಡಿ ಸಿಎಂ ಹತ್ತಿರ ಹೋಗಿದ್ದಾರೆ. ಆದರೆ ಅನುದಾನ ಇಲ್ಲ ಅಂತ ಅಲ್ಲಿಂದ ವಾಪಾಸ್ ಬಂದಿದ್ದಾರೆ ಎಂದು ಹೇಳಿದರು.
ಈ ತಿಂಗಳ ಅಂತ್ಯಕ್ಕೆ ಮೊದಲ ಕಾಂಗ್ರೆಸ್ ಪಟ್ಟಿ
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕೆಪಿಸಿಸಿ ಟಿಕೆಟ್ ಹೆಸರು ಫೈನಲ್ ಅಗಿದೆ. ಈಗ ಸ್ಕ್ರೀನಿಂಗ್ ಕಮಿಟಿ ಮುಂದೆ ಇದೆ. ಆ ಬಳಿಕ ಅದು ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಸಮಿತಿ ಮುಂದೆ ಬರುತ್ತೆ. ನಾನು ಸಮಿತಿಯಲ್ಲಿ ಇರೋ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿಯ ಆಕಾಂಕ್ಷಿಗಳ ಜೊತೆ ಚರ್ಚೆ ಮಾಡ್ತೇನೆ. ಇಲ್ಲಿನ ವಾತಾವರಣದ ಬಗ್ಗೆ ಮಾಹಿತಿ ಪಡೆದು ಸಮಿತಿ ಮುಂದೆ ಇಡುತ್ತೇನೆ. ಫೆ.7 ಮತ್ತು 8 ಕ್ಕೆ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಇದೆ. ಈ ತಿಂಗಳ ಅಂತ್ಯಕ್ಕೆ ಮೊದಲ ಪಟ್ಟಿ ಬರಬಹುದು. ಎಐಸಿಸಿ ಯುವಕರಿಗೆ ಅವಕಾಶ ಕೊಡಲು ಹೇಳಿದೆ. ಎಐಸಿಸಿ, ಕೆಪಿಸಿಸಿ ಸೇರಿ ಮೂರ್ನಾಲ್ಕು ಸರ್ವೇ ಈಗ ಆಗಿದೆ. ಗೆಲ್ಲುವ ಯುವ ಅಭ್ಯರ್ಥಿ ಇದ್ದರೆ ಅವರಿಗೆ ಅವಕಾಶ ಸಿಗಲಿದೆ ಎಂದು ತಿಳಿಸಿದರು.