ಹುಬ್ಬಳ್ಳಿ: ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಇಂದು ಧಾರವಾಡದ 2ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ವಿನಯ ಕುಲಕರ್ಣಿಯನ್ನ 11 ಗಂಟೆಗೆ ನ್ಯಾಯಾಧೀಶರ ಎದುರು ಹಾಜರು ಪಡಿಸಲಿರುವ ಸಿಬಿಐ ಅಧಿಕಾರಿಗಳು ಮತ್ತೆ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಮೂರು ದಿನ ಸಿಬಿಐ ಕಸ್ಟಡಿಯಲ್ಲಿದ್ದ ವಿನಯ ಕುಲಕರ್ಣಿಯನ್ನು ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನೆಡೆಸಿದ ಸಿಬಿಐ, ವಿಚಾರಣೆ ಇನ್ನೂ ಅಪೂರ್ಣ ಆಗಿರುವ ಹಿನ್ನೆಲೆ ಮತ್ತು ಕೊಲೆ ಪ್ರಕರಣ, ಸಾಕ್ಷ್ಯ ನಾಶ ಪ್ರಕರಣದಲ್ಲಿ ಇನ್ನೂ ಹಲವರ ವಿಚಾರಣೆ ಕೂಡ ಬಾಕಿ ಇರುವ ಕಾರಣಕ್ಕೆ ವಿನಯ್ ಕುಲಕರ್ಣಿಯನ್ನು ಮತ್ತೆ ವಶಕ್ಕೆ ಕೇಳುವ ಸಾಧ್ಯತೆಯಿದೆ.
ಪೊಲೀಸ್ ಅಧಿಕಾರಿಗಳಾದ ಚನ್ನಕೇಶವ ಟಿಂಗ್ರೀಕರ್, ವಾಸುದೇವ ನಾಯಕ, ಗುರುರಾಜ ಹುಣಸೀಮರದ್ ಹಾಗೂ ತುಳಜಪ್ಪ ಸುಲ್ಫಿ ವಿಚಾರಣೆ ಇನ್ನೂ ಬಾಕಿ ಇದ್ದು, ಯೋಗೀಶಗೌಡ ಕೊಲೆ ಆದಾಗ ಚನ್ನಕೇಶವ ಟಿಂಗ್ರೀಕರ್ ತನಿಖಾಧಿಕಾರಿ ಆಗಿದ್ರು. ವಾಸುದೇವ ನಾಯಕ ಅಂದು ಧಾರವಾಡದ ACP ಆಗಿದ್ರು. ಇನ್ನು ತುಳಜಪ್ಪ ಸುಲ್ಫಿ, ವಿಜಯಪುರದ
ಡಿವೈಎಸ್ಪಿ ಆಗಿದ್ದು ಕೊಲೆಯ ಬಳಿಕ ಸಂಧಾನಕ್ಕೆ ಪ್ರಯತ್ನಿಸಿದ್ರು. ಇವರದ್ದೆಲ್ಲ ವಿಚಾರಣೆ ಬಾಕಿ ಇರೊ ಹಿನ್ನೆಲೆಯಲ್ಲಿ ಇನ್ನೂ 7 ದಿನ ಸಿಬಿಐ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಹೀಗಾಗಿ ಧಾರವಾಡ ಜಿಲ್ಲಾ ನ್ಯಾಯಾಲಯದ ಸುತ್ತ ಮುತ್ತಲೂ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮುಖಂಡರು ಆಗಮಿಸುತ್ತಿರುವ ಹಿನ್ನಲೆ ನ್ಯಾಯಾಲಯದ ಸುತ್ತ ಮುತ್ತಲೂ ಗೇಟ್ ಮುಂದೆ ಪೊಲೀಸ್ ಭದ್ರತೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
ಇತ್ತ ಉಪನಗರ ಪೊಲೀಸ್ ಠಾಣೆಗೂ ಸಾಕಷ್ಟು ಪೊಲೀಸ್ ಭದ್ರತೆ ನೀಡಲಾಗಿದೆ. ವಿನಯ್ ಕುಲಕರ್ಣಿ ನ್ಯಾಯಾಲಯಕ್ಕೆ ಹಾಜರಾಗಲಿರುವ ಹಿನ್ನಲೆ ಉಪನಗರ ಪೊಲೀಸ್ ಠಾಣೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಹಾಜರಾಗಲು ಕರೆ ನೀಡಲಾಗಿದೆ. ಫೇಸ್ ಬುಕ್ ನಲ್ಲಿ ವಿನಯ ಕುಲಕರ್ಣಿ ಯುವ ಪಡೆ ಕರೆ ನೀಡಿರುವ ಕಾರಣಕ್ಕಾಗಿ ಹೆಚ್ಚಿನ ಭದ್ರತೆಗೆ ಪೊಲೀಸರು ಒತ್ತು ಕೊಟ್ಟಿದ್ದಾರೆ. ಇನ್ನು ಯುವ ಪಡೆಯ ಈ ಕರೆಯಿಂದ ಪೊಲೀಸರು ಗರಂ ಆಗಿದ್ದು, ಆಂದೋಲವನ್ನು ಆರಂಭ ಮಾಡಿದವರ ಬಂಧನಕ್ಕೇ ಮುಂದಾಗಿದ್ದಾರೆ. ನ್ಯಾಯಾಲಯದ ಸುತ್ತ ಮುತ್ತಲೂ ಸೇರುವ ಮುನ್ನವೇ ಮುಂಚಿತವಾಗಿ ಬಂಧನಕ್ಕೆ ಪೊಲೀಸರು ಪ್ಲಾನ್ ಮಾಡಿದ್ದಾರೆ.