ವಿಜಯಪುರ: ಭೀಮಾತೀರದಲ್ಲಿ ಮತ್ತೆ ಗುಂಡಿನ ಬೋರ್ಗರೆತ ಮೊಳಗಿದೆ. ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಫೈರಿಂಗ್ ನಡೆದಿದೆ. ಅಪರಿಚಿತರಿಂದ ಗುಂಡಿನ ದಾಳಿ ನಡೆದಿದ್ದು, ಮಹಾದೇವ ಸಾಹುಕಾರನಿಗೆ ಗಾಯವಾಗಿದ್ರೆ, ಅವರ ಸಹಚರ ಬಾಬುರಾಯ ಗುಂಡಿನ ದಾಳಿಗೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಬಾಬುರಾಮ್ ಸಾವನ್ನು ಎಸ್ಪಿ ಅನುಪಮ್ ಅಗರವಾಲ್ ಖಚಿತಪಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಅರಕೇರಿ ತಾಂಡಾ ಬಳಿ ಈ ನಡೆದ ಘಟನೆ ನಡೆದಿದೆ. ಮಹಾದೇವ ಸಾಹುಕಾರ ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್ ಢಿಕ್ಕಿ ಮಾಡಿ ಬಳಿಕ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.
ಗಾಯಗೊಂಡ ಇಬ್ಬರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಾದೇವ ಸಾಹುಕಾರ್ ಭೈರೊಗೊಂಡಗೆ ಎರಡು ಗುಂಡುಗಳು ತಗುಲಿವೆ. ಬಾಬುರಾಯಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಫಲಿಸದೇ ಸಾವಾಗಿದೆ. ಇನ್ನು ಆಸ್ಪತ್ರೆ ಸುತ್ತಲು ಬೈರಗೊಂಡ ಸಾಹುಕಾರನ ಬೆಂಬಲಿಗರು ನಿಂತಿದ್ದಾರೆ. ಇನ್ನು ಬೈರಗೊಂಡ ಬೆಂಬಲಿಗರು ರಕ್ತಮಯವಾಗಿರೋ ಬಟ್ಟೆ ಧರಿಸಿ ಓಡಾಡುತ್ತಿದ್ದಾರೆ. ಪೈರಿಂಗ್ ವೇಳೆ ಗಾಯಗೊಂಡ ಮಹಾದೇವ ಬೈರಗೊಂಡನನ್ನ ಕಾರಿನಲ್ಲಿ ಹಾಕಿಕೊಂಡು ಬಿಎಲ್ಡಿ ಆಸ್ಪತ್ರೆಗೆ ಅವರ ಬೆಂಬಲಿಗರು ತಂದಿದ್ದಾರೆ.
ಇನ್ನು ಈ ವಿಚಾರವಾಗಿ ಪ್ರತ್ಯಕ್ಷದರ್ಶಿ ತಮ್ಮಾರಾವ್ ಬೈರಗೊಂಡ ಹೇಳಿಕೆ ನೀಡಿದ್ದು, ನೋಡ ನೋಡುತ್ತಿದ್ದಂತೆ 20 ಜನರ ತಂಡ ದಾಳಿ ನಡೆಸಿದೆ. ಅವರ ಕೈಯಲ್ಲಿ ಬಂದೂಕುಗಳಿದ್ದವು. ಎರಡು ಟಿಪ್ಪರ್ ಮೂಲಕ ಸಾಹುಕಾರ್ ಕಾರ್ ನಿಲ್ಲಿಸಿ ಪೈರಿಂಗ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಹೊಡೆಯೋದಕ್ಕೆ ಪ್ಲಾನ್ ಹಾಕಿದ್ದರು. ಅಲ್ಲದೇ ಊರಲ್ಲಿ ಸಾಹುಕಾರನ್ನ ವಾಚ್ ಮಾಡಿದ್ದರು. ಈಗ ದಾಳಿ ಮಾಡಿದ್ದಾರೆ. ಎದುರಾಳಿ ಗ್ಯಾಂಗ್, ಚಡಚಣ ಗ್ಯಾಂಗ್ ನಿಂದ ಈ ಕೃತ್ಯ ನಡೆದಿದೆ. ಹೊಡೆದವರು ಸ್ಥಳೀಯರು ಎನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಘಟನೆಯ ಹಿನ್ನಲೆ ನೋಡಿದಾಗ ತೊಗರಿ ಹೊಲದಲ್ಲಿ ಅವಿತು ಕುಳಿತಿದ್ದ ಹಂತಕರು, ಸಿನಿಮಾ ಸ್ಟೈಲ್ನಲ್ಲೆ ಅಟ್ಯಾಕ್ ನಡೆಸಿದ್ದಾರೆ. ಮೊದಲೇ ಪ್ಲಾನ್ ಮಾಡಿ ತೊಗರಿ ಹೊಲದಲ್ಲಿ ಬಂದೂಕು ಸಮೇತ ಕುಳಿತಿದ್ದ ಹಂತಕರು, ಮೊದಲು ಮಹಾದೇವ ಬೈರಗೊಂಡ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆಸಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಹೋದ ಹಂತಕರು, ಬಳಿಕ ಕಾರಿನ ಗ್ಲಾಸ್ ಒಡೆದು ಪೈರಿಂಗ್ ಮಾಡಿದ್ದಾರೆ. ಇನ್ನು ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಮೂರು ಜನರಿಗೆ ಗಾಯಗಳಾಗಿವೆ. ಬಾಬುರಾಯ ಸಾವನ್ನಪ್ಪಿದ್ದು, ಮಹಾದೇವ ಸಾಹುಕಾರ ಭೈರಗೊಂಡಗೆ ಬಲಭುಜದ ಹಿಂಭಾಗಕ್ಕೆ ಹೊಕ್ಕಿರುವ ಒಂದು ಗುಂಡು, ಹೊಟ್ಟೆಗೆ ತಾಗಿ ಹೊರ ಹೋಗಿದೆ. ಮತ್ತೋರ್ವ ಸಹಚರ ಹುಸೇನಿ ಭಜಂತ್ರಿ ತಲೆಗೆ ಗುಂಡು ತಾಗಿದ್ದು, ಚಾಲಕನ ಕಾಲು ಕಟ್ ಆಗಿದೆ.
ಗಾಯಾಳುಗಳಿಗೆ ವಿಜಯಪುರ ಬಿಎಲ್ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಇನ್ನು ಈ ಕುರಿತು ಹೇಳಿಕೆ ನೀಡಿರುವ ವಿಜಯಪುರ ಎಸ್ಪಿ ಅನುಪಮ್ ಅಗರವಾಲ್, ಇಂದು ಮಧ್ಯಾಹ್ನ 3 ರಿಂದ 3.30ರ ಮಧ್ಯೆ ಮಹಾದೇವ ಸಾಹುಕಾರನ ಮೇಲೆ ದಾಳಿಯಾಗಿದೆ. ಟಿಪ್ಪರ ಡಿಕ್ಕಿಯಾಗಿ ಅಪಘಾತ ಮಾಡಲಾಗಿದೆ. 10 ರಿಂದ 15 ಜನರ ತಂಡ ಕಲ್ಲು ತೂರಾಟ ಮಾಡಿ ಪಿಸ್ತೂಲಿನಿಂದ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಬಾಬುರಾಮ ಮಾರುತಿ ಕಂಚಾಳ(64) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಮಹಾದೇವ ಸಾಹುಕಾರ ಭೈರಗೊಂಡ ಹೊಟ್ಟೆಗೆ 2, ಬೆನ್ನಿನ ಪಕ್ಕೆಲುಬಿಗೆ ಒಂದು ಗುಂಡು ತಗುಲಿದೆ. ಈ ಪ್ರಕರಣದ ತನಿಖೆಗೆ ಪೊಲೀಸರ ತಂಡ ರಚಿಸಲಾಗಿದೆ. ಈ ದಾಳಿಯ ಹಿಂದೆ ಹಳೆಯ ವೈಷಮ್ಯವಿರುವ ಬಗ್ಗೆ ತನಿಖೆ ಮಾಡಲಾಗುವುದು. ಮಹಾದೇವ ಸಾಹುಕಾರ, ಬೆಂಬಲಿಗರು 3 ಕಾರುಗಳಲ್ಲಿ ತೆರಳುತ್ತಿದ್ದರು. ಒಂದು ಕಾರಿನಲ್ಲಿ ಮಹಾದೇವ ಸಾಹುಕಾರ ಭೈರಗೊಂಡ, ಲಕ್ಷ್ಮಣ ಖೋಗಾಂವ, ಜಗಬೀರಸಿಂಗ್, ಹುಸೇನಿ ಭಜಂತ್ರಿ, ರಮೇಶ ಸಂಚರಿಸುತ್ತಿದ್ದರು. ಮತ್ತೋಂದು ಕಾರಿನಲ್ಲಿ ಶಿವರಾಜ ಭೈರಗೊಂಡ, ವಾಬುರಾಮ ಕಂಚನಾಳ ಸಂಚರಿಸುತ್ತಿದ್ದರು. ಮೂರನೇ ವಾಹನದಲ್ಲಿ ಐದು ಜನ ಸಂಚರಿಸುತ್ತಿದ್ದರು ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಮಾಹಿತಿ ನೀಡಿದ್ದಾರೆ.