ನಾಗಮಂಗಲ: ರಾಜ್ಯದಲ್ಲಿ ಒಕ್ಕಲಿಗ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬುವುದಕ್ಕೆ ಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಧು ವರ ಸಮಾವೇಶ ಸಾಕ್ಷಿ ಎಂಬಂತಿತ್ತು. ಹೌದು ಆದಿಚುಂಚನಗಿರಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಸಾವಿರಾರು ಒಕ್ಕಲಿಗ ಹುಡುಗರು ಇಲ್ಲಿ ವಧುವಿಗಾಗಿ ಮುಗಿಬಿದ್ದಿದ್ದರು. ರಾಜ್ಯ ಮಟ್ಟದ ಸಮಾವೇಶಕ್ಕೆ 200 ಒಕ್ಕಲಿಗ ಹುಡುಗಿಯರು ಬಂದಿದ್ದರೆ, 10 ಸಾವಿರಕ್ಕೂ ಅಧಿಕ ಗಂಡು ಮಕ್ಕಳು ಬಾಳ ಸಂಗಾತಿಯನ್ನು ಅರಸಿ ಬಂದಿದ್ದರು.
ನಾಗಮಂಗಲ ತಾಲೂಕಿನ ಚುಂಚನಗಿಯಲ್ಲಿ ಇಂತಹ ದೃಶ್ಯ ಹಾಗೂ ಹುಡುಗರ ಅರ್ಜಿ ಸಂಖ್ಯೆ ನೋಡಿ ಸಮಾವೇಶ ಆಯೋಜಿಸಿದ್ದ ಸುಸ್ತಾಗಿದ್ದಾರೆ. ಹುಡುಗಿಯರಿಗಾಗಿ ಸಮಾವೇಶದಲ್ಲಿ ಸಾವಿರಾರು ಹುಡುಗರು ತಮ್ಮ ಹೆತ್ತವರೊಂದಿಗೆ ಕ್ಯೂ ನಿಂತಿದ್ದರು. ಮತ್ತೊಂದೆಡೆ ಈ ಹೆಚ್ಚಿನ ಜಮಸ್ತೋಮದಿಂದಾಗಿ ಚುಂಚನಗಿರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಪರದಾಡಿದ್ದಾರೆ.
ಕೃಷಿಯಲ್ಲಿ ತೊಡಗಿಸಿಕೊಂಡಿರುವ ಹುಡುಗರು
ಇನ್ನು ಸಮಾವೇಶಕ್ಕೆ ಆಗಮಿಸಿದ್ದ ಬಹುತೇಕ ಒಕ್ಕಲಿಗ ಗಂಡು ಮಕ್ಕಳು ರೈತರು ಅಥವಾ ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡವರು. ರೈತರೇ ನಾಡಿನ ಜೀವನಾಡಿ ಎನ್ನುವ ಈ ದಿನಗಳಲ್ಲಿ ರೈತರೊಂದಿಗೆ ಮದುವೆಯಾಗಲು ಹೆಣ್ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಏನೇ ಆದರೂ ಇಂಜಿನಿಯರ್, ಡಾಕ್ಟರ್ ವೃತ್ತಿ ಆರಿಸಿಕೊಂಡಿರುವ ಹುಡುಗರೇ ಇಂದು ಬಹುತೇಕ ಹೆಣ್ಮಕ್ಕಳ ಪ್ರಥಮ ಆದ್ಯತೆಯಾಗಿದೆ ಎಂಬುವುದು ಕಹಿ ಸತ್ಯ. ವಧು-ವರರ ಸಮಾವೇಶದಲ್ಲಿ ರೈತ ಸಮೂಹದ ಹುಡುಗರು ಹೆಚ್ಚಾಗಿದ್ದು ವಿಶೇಷವಾಗಿತ್ತು
ಚುಂಚನಗಿರಿ ಮಹಾ ಸಂಸ್ಥಾನ ಮಠ, ಸಮಾಜ ಸಂಪರ್ಕ ವೇದಿಕೆ(ರಿ) ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಈ ಸಮಾವೇಶ ನಡೆದಿತ್ತು ಎಂಬುವುದು ಉಲ್ಲೇಖನೀಯ. ಇನ್ನು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ಬರುವಂತಹ ಸಂದರ್ಭದಲ್ಲಿ ಹಾಗೂ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾದರೆ ಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯದ ಪ್ರತಿಯೊಬ್ಬರೂ ಹೋರಾಟಕ್ಕೆ ಆಗಮಿಸಬೇಕು ಎಂದು ಕರೆ ನೀಡಿದ್ದಾರೆ. ಸಾಲು ಸಾಲು ವಾಹನಗಳು
ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನಾಗಮಂಗಲ ತಾಲೂಕಿನ ಅಂಬಲಜೀರಹಳ್ಳಿ ಗ್ರಾಮದಿಂದ ಆದಿಚುಂಚನಗಿರಿ ಮಠದವರೆಗೆ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿ.ಮೀ.ಗಟ್ಟಲೆ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಮಾವೇಶ ಮುಗಿದ ನಂತರವೂ ಟ್ರಾಫಿಕ್ ಜಾಮ್ ಉಂಟಾಯಿತು.