ಕೂಗು ನಿಮ್ಮದು ಧ್ವನಿ ನಮ್ಮದು

ಕೋವಿಡ್ ನಿಯಂತ್ರಿಸಲು ಸರ್ಕಾರವೊಂದಕ್ಕೆ ಸಾಧ್ಯವಿಲ್ಲ, ಜನರು ಸಹ ಮುನ್ನೆಚ್ಚರಿಕೆ ವಹಿಸಬೇಕು: ಕೆ. ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಿಸಲು ಸರ್ಕಾರವೊಂದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕೆ ಜನರು ಕೂಡ ಮುನ್ನೆಚ್ಚರಿಕೆಯಿಂದ ಇರಬೇಕೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ರು. ಸಿಎಂ ಬೊಮ್ಮಾಯಿ ಅವರ ನಿರ್ದೇಶನದಂತೆ ಇವತ್ತಿನಿಂದ ಏರ್ ಪೋರ್ಟ್‍ನಲ್ಲಿ ವಿದೇಶಿ ಪ್ರಯಾಣಿಕರಿಗೆ ಕಡ್ಡಾಯವಾಗಿ RTPCR ಟೆಸ್ಟ್ ಮಾಡಲು ಪ್ರಾರಂಭ ಮಾಡಿದ್ದೇವೆ. ಈ ಕುರಿತ ಸಿದ್ಧತೆಗಳನ್ನು ಖುದ್ದಾಗಿ ನಾನೇ ಏರ್‍ಪೋರ್ಟ್‍ಗೆ ಭೇಟಿ ಕೊಟ್ಟು ಪರೀಶೀಲನೆ ನಡೆಸಿ ಬಂದಿದ್ದೇನೆ.

ಏರ್ ಪೋರ್ಟ್‍ನಲ್ಲಿ ಕೋವಿಡ್ ಟೆಸ್ಟ್ ಆದ ನಂತರ ವರದಿ ಬರುವವರೆಗೂ ಪ್ರಯಾಣಿಕರು ಅಲ್ಲಿಯೇ ಇರಬೇಕಾಗುತ್ತದೆ. ಡಿಸೆಂಬರ್ ಎರಡರಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ದೆಹಲಿಯಲ್ಲಿ ಆರೋಗ್ಯ ಸಚಿವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ರು. ಕೊರೊನಾ ವಾರಿಯರ್ಸ್‍ಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಹೇಳಿದರು.

ಕೋವಿಡ್ ನಿಯಂತ್ರಣಕ್ಕೆ ಕಠಿಣ ಮಾರ್ಗಸೂಚಿಗಳನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಜನರು ಸಹ ಮುನ್ನೆಚ್ಚರಿಕೆಯಿಂದ ಇರಬೇಕು. ಸರ್ಕಾರ ಒಂದೇ ಇದನ್ನು ನಿಭಾಯಿಸಲು ಸಾಧ್ಯವಿಲ್ಲ. ಜನರು ನಮ್ಮ ಜೊತೆ ಕೈ ಜೋಡಿಸಬೇಕು. ಜನರು ತಾವೇ ಖುದ್ದಾಗಿ ಬಂದು ವ್ಯಾಕ್ಸಿನೇಷನ್‌ ಪಡೆಯಬೇಕು. ರಾಜ್ಯದಲ್ಲಿ ಎಲ್ಲಿಯೂ ಸಹ ವ್ಯಾಕ್ಸಿನೇಷನ್‌ ಕೊರತೆ ಇಲ್ಲ. ಲಕ್ಷಾಂತರ ಲಸಿಕೆ ದಾಸ್ತಾನು ಇದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಇದೇ ವೇಳೆ ವ್ಯಾಕ್ಸಿನ್ ಪಡೆಯದವರಿಗೆ ಸರ್ಕಾರಿ ಸೌಲಭ್ಯ ನೀಡದ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಸುಧಾಕರ್, ಸರ್ಕಾರ ಇಂತಹ ಶಿಫಾರಸ್ಸು ಒಪ್ಪುವುದಿಲ್ಲ. ಇದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ. ಆಂದೋಲನ ಮಾಡಿ ಜಾಗೃತಿ ಮೂಡಿಸಿ ಲಸಿಕೆ ಕೊಡುತ್ತೇವೆ. ಈಗ ಕ್ರಿಸ್ ಮಸ್ ಹಾಗೂ ನ್ಯೂ ಇಯರ್ ಆಚರಣೆಗೆ ಅಗತ್ಯ ಬಿದ್ರೆ ಕಠಿಣ ಕ್ರಮ ತಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ರು.
ಓಮಿಕ್ರಾನ್ ವೇಗವಾಗಿ ಹರಡುತ್ತದೆ. ಹಾಗಾಗಿ ಈಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಾಲ ಕಾಲ ಮಾರ್ಗಸೂಚಿ ಬದಲಾವಣೆ ಮಾಡುವುದಕ್ಕೆ ನಿರ್ಧಾರ ಮಾಡುತ್ತೇವೆ. ಮನೆ ಮನೆಗೆ ವ್ಯಾಕ್ಸಿನೇಷನ್‌ ನೀಡುವ ಕೆಲಸ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ನೀಡಲಾಗುತ್ತಿದೆ. ಅತ್ಯಂತ ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಸುಧಾಕರ್ ಹೇಳಿದ್ದಾರೆ.

error: Content is protected !!