ಕೂಗು ನಿಮ್ಮದು ಧ್ವನಿ ನಮ್ಮದು

ಮಕ್ಕಳಿಗೆ ವ್ಯಾಕ್ಸಿನ್ ಭಾಗ್ಯ, ಎರಡರಿಂದ ಹದಿನೆಂಟು ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

ನವದೆಹಲಿ: ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಎರಡರಿಂದ ಹದಿನೆಂಟು ವರ್ಷದ ಮಕ್ಕಳಿಗೆ ಭಾರತ ಬಯೋಟೆಕ್ ಕೋವ್ಯಾಕ್ಸಿನ್ ನೀಡಲು ತಜ್ಞರ ಸಮಿತಿ ಅನುಮತಿಯನ್ನು ನೀಡಿದೆ.
ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ನೀಡಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ತುರ್ತು ಬಳಕೆಗೆ DCGI ಅನುಮತಿ ನೀಡಿದೆ. ಇವತ್ತು ನಡೆದ ವಿಷಯ ತಜ್ಞರ ಸಮಿತಿ ಸಭೆಯಲ್ಲಿ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕಿದೆ.

ಕೋವಿಡ್ ೩ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇದೀಗ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ಸಿಕ್ಕಿರುವುದು ಸಮಾಧಾನಕರ ಸಂಗತಿಯಾಗಿದ್ದು, ೨ ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಭಾರತ್ ಬಯೋಟೆಕ್‍ನ ಕೋವ್ಯಾಕ್ಸಿನ್ ಲಸಿಕೆಯ ಪರೀಕ್ಷೆ ನಡೆದಿದ್ದು, ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಸಂಬಂಧಿಸಿದ ದತ್ತಾಂಶವನ್ನು ಭಾರತ್ ಬಯೋಟೆಕ್ ಕಂಪನಿ DCGIಗೆ ಸಲ್ಲಿಸಿತ್ತು. ICMR ಹಾಗೂ ಹೈದರಾಬಾದ್ ಮೂಲದ ಲಸಿಕೆ ತಯಾರಕ ಭಾರತ್ ಬಯೋಟೆಕ್ ಕೊವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದ್ದರು.

ಭಾರತದ ಮೊದಲ ಸ್ಥಳೀಯ ಕೋವಿಡ್ ೧೯ ಲಸಿಕೆ ಆಗಿದೆ. ಎರಡರಿಂದ ಹದಿನೆಂಟು ವರ್ಷದ ಮಕ್ಕಳಿಗೆ ಲಸಿಕೆ ನೀಡಲು ತಜ್ಞರ ತಂಡ ಒಪ್ಪಿಗೆ ಸೂಚಿಸಿದೆ. ಮಕ್ಕಳಿಗೆ ಕೋವ್ಯಾಕ್ಸಿನ್ ನೀಡುವ ಬಗ್ಗೆ ೧ ವಾರದ ಹಿಂದೆ ಕ್ಲಿನಿಕಲ್ ಪ್ರಯೋಗದ ವರದಿಯನ್ನು DCGIಗೆ ಸಲ್ಲಿಸಲಾಗಿತ್ತು. ಈ ವರದಿ ೧,೨ ಹಾಗೂ ೩ನೇ ಹಂತದ ಕ್ಲಿನಿಕಲ್ ಪರೀಕ್ಷೆಯ ವಿವರ, ಫಲಿತಾಂಶವನ್ನು ಒಳಗೊಂಡಿತ್ತು. ಸೆಪ್ಟೆಂಬರ್ ೨೧ರಂದು ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡುವ ೩ನೇ ಹಂತದ ಪ್ರಯೋಗ ಪೂರ್ಣಗೊಂಡಿತ್ತು. ಒಟ್ಟು ೧,೦೦೦ ಮಕ್ಕಳ ಮೇಲೆ ಪ್ರಯೋಗ ನಡೆಸಲಾಗಿತ್ತು.

ಭಾರತ ಮೂಲದ ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಜೈಕೊವ್-ಡಿ ಲಸಿಕೆಯ ತುರ್ತು ಬಳಕೆಗೆ ಈಗಾಗಲೇ ಅನುಮತಿ ಸಿಕ್ಕಿದೆ. ೩ ಡೋಸ್‍ಗಳನ್ನು ಹೊಂದಿರುವ ಈ ಲಸಿಕೆಯನ್ನು ಅಕ್ಟೋಬರ್ ನಂತರ ೧೨ ರಿಂದ ೧೭ ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವುದು. ಮುಖ್ಯವಾಗಿ ಆರೋಗ್ಯ ಸಮಸ್ಯೆಗಳಿರುವ ಮಕ್ಕಳಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗುವುದು ಎನ್ನಲಾಗಿದೆ. ೧೨ ವರ್ಷದಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಈ ಜೈಕೋವ್-ಡಿ ಲಸಿಕೆ ಬಹಳ ಪರಿಣಾಮಕಾರಿಯಾಗಲಿದೆ.
ICMR ನಡೆಸಿದ ಸೆರೊಸರ್ವೇ, ದೇಶದಲ್ಲಿ ಸುಮಾರು ಶೇಕಡಾ ೬೦ ಮಕ್ಕಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ.

ಮಕ್ಕಳಲ್ಲಿ ಸೋಂಕಿನಿಂದ ಮರಣ ಪ್ರಮಾಣ ದಶಲಕ್ಷದಲ್ಲಿ ೨ ಆಗಿದೆ. ಇದು ಅತಿ ಕನಿಷ್ಠವಾಗಿದೆ. ಭಾರತ್ ಬಯೋಟೆಕ್‍ನ ಕೋವ್ಯಾಕ್ಸಿನ್ ಲಸಿಕೆಯು ವಯಸ್ಕರಂತೆಯೇ ಮಕ್ಕಳಲ್ಲಿ ಕೂಡ ಪರಿಣಾಮ ತೋರುತ್ತದೆ. ಲಸಿಕೆಯ ಸುರಕ್ಷತೆ ಮತ್ತು ರೋಗನಿರೋಧಕ ಶಕ್ತಿ ಮಕ್ಕಳಲ್ಲಿಯೂ ವಯಸ್ಕರಂತೆಯೇ ಇರಲಿದೆ ಎಂದು ಏಮ್ಸ್ ಸೆಂಟರ್ ಫಾರ್ ಕಮ್ಯುನಿಟಿ ಮೆಡಿಸಿನ್ ಪ್ರೊಫೆಸರ್ ಡಾ. ಸಂಜಯ್ ರೈ ತಿಳಿಸಿದ್ರು. ಕೋವ್ಯಾಕ್ಸಿನ್ ಲಸಿಕೆಯನ್ನು ೩ ವಯೋಮಾನದವರಲ್ಲಿ ನಡೆಸಲಾಗಿದೆ. ಮೊದಲು ೧೨-೧೮ ವಯೋಮಾನದವರಲ್ಲಿ, ಎರಡನೆಯದಾಗಿ ೬-೧೨ ವಯೋಮಾನ ಮತ್ತು ಮೂರನೆಯದಾಗಿ ೨-೬ ವಯೋಮಾನದವರಲ್ಲಿ ಲಸಿಕೆ ಪ್ರಯೋಗ ನಡೆಸಲಾಗಿದೆ. ಈ ಪ್ರಯೋಗಗಳಲ್ಲಿ ಕೋವ್ಯಾಕ್ಸಿನ್ ವಯಸ್ಕರಂತೆಯೇ ಮಕ್ಕಳ ಮೇಲೂ ಪರಿಣಾಮ ಬೀರಲಿದೆ ಎಂದು ತಿಳಿದು ಬಂದಿದೆ.

error: Content is protected !!