ವಿಶ್ವದಾದ್ಯಂತ ಕಲ್ಲಿದ್ದಲು ಅಭಾವ, ಇಂದನ ಕೊರತೆ ಹೆಚ್ಚು ಆತಂಕ ತರುತ್ತಿರುವ ಹಿನ್ನೆಲೆಯಲ್ಲಿ ನಮ್ಮ ರಾಷ್ಟ್ರದಲ್ಲಿ ಕಲ್ಲಿದ್ದಲ ಅಭಾವ ಕಾಡದಂತೆ ವ್ಯವಸ್ಥಿತವಾಗಿ ನೋಡಿಕೊಂಡವರು ನಮ್ಮ ಕನ್ನಡಿಗ ಗಣಿ, ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ. ಹಾಗೆ ಹೇಳುವುದಾದರೆ ಕಲ್ಲಿದ್ದಲು ಕೊರತೆ ಪರಿಸ್ಥಿತಿ ನಿರ್ವಹಣೆಯನ್ನು ಅತ್ಯಂತ ಸೂಕ್ಷ್ಮವಾಗಿ ಸಮಂಜಸವಾಗಿ ತಾರ್ಕಿಕವಾಗಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಪ್ರಹ್ಲಾದ್ ಜೋಶಿಯವರ ಹೆಗ್ಗಳಿಕೆಯೇ ಸರಿ. ವಿರೋಧ ಪಕ್ಷಗಳು ಕಲ್ಲಿದ್ದಲು ಕೊರತೆ, ದಾಸ್ತಾನಿನ ಲೆಕ್ಕ ಕೇಳುತ್ತಿದ್ದಾಗ ಯಾವು ಟೀಕೆಗಳನ್ನೂ ತಲೆಗೆ ಹಚ್ಚಿಕೊಳ್ಳದೇ ಸಮರೋಪಾದಿಯಲ್ಲಿ ಬೇಡಿಕೆಗೆ ತಕ್ಕ ಪೂರೈಕೆ ಒದಗಿಸಿದ್ದು ಸಚಿವ ಜೋಶಿಯವರ ಕಾರ್ಯಕ್ಷಮತೆ ಮತ್ತು ಬದ್ಧತೆಗೆ ಹಿಡಿದ ಕೈಗನ್ನಡಿ.
ನಮ್ಮ ದೇಶದಲ್ಲಿ ಒಟ್ಟು 135 ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿವೆ. ಶೇ. 70% ರಷ್ಟು ವಿದ್ಯುತ್ ಕಲ್ಲಿದ್ದಲು ಬಳಸಿ ಉತ್ಪಾದಿಸುವ ದೇಶ ನಮ್ಮದು. 2019 ಕಾಲಕ್ಕೆ ಹೋಲಿಸಿದರೆ ಕಳೆದ ಕೆಲವು ತಿಂಗಳಲ್ಲಿ ವಿದ್ಯುತ್ ಬಳಕೆ ಸುಮಾರು 17% ರಷ್ಟು ಹೆಚ್ಚಾಗಿದೆ. ಇದೇ ವೇಳೆ ಜಾಗತಿಕ ಕಲ್ಲಿದ್ದಲು ಬೆಲೆಗಳು ಶೇ. 40% ರಷ್ಟು ಹೆಚ್ಚಾಗಿದೆ. ಕಳೆದ ಅಕ್ಟೋಬರ್ 3ರ ಹೊತ್ತಿಗೆ, ಭಾರತದ 135 ಉಷ್ಣ ವಿದ್ಯುತ್ ಸ್ಥಾವರಗಳು ಕೇವಲ ನಾಲ್ಕು ದಿನಗಳ ಮೌಲ್ಯದ ಕಲ್ಲಿದ್ದಲು ದಾಸ್ತಾನುಗಳನ್ನು ಹೊಂದಿದ್ದವು. ಈ ಸಂಗತಿಯ ಕುರಿತು ಹೆಚ್ಚು ಬೆಳಕು ಚೆಲ್ಲಿದ್ದ ಜಾಗತಿಕ ಮಾಧ್ಯಮ ಸಂಸ್ಥೆಗಳಾದ ಬಿಬಿಸಿ, ಫೈನಾನ್ಷಿಯಲ್ ಟೈಂ ಮತ್ತು ಅಲ್‌ಜಜೀರಾ ಮೊದಲಾದವು ಭಾರತದಲ್ಲಿ ವಿದ್ಯುತ್ ಬಿಕ್ಕಟ್ಟು ಮಿತಿ ಮೀರಿದೆ ಎನ್ನು ತಲೆಬರಹದಡಿ ವರದಿ ಮಾಡಿದ್ದವು.
ಅಕ್ಟೋಬರ್ 2021ರ ಮೊದಲ ವಾರದಲ್ಲಿ, ಇದ್ದಕ್ಕಿದ್ದಂತೆ ಪ್ರಮುಖ ಸುದ್ದಿ ಸಂಸ್ಥೆಗಳು ಭಾರತದಲ್ಲಿ ಕಲ್ಲಿದ್ದಲು ಕೊರತೆಯ ಬಗ್ಗೆ ವರದಿ ಮಾಡಲು ಪ್ರಾರಂಭಿಸಿದಾಗ ನಿಜಕ್ಕೂ ಸರ್ಕಾರ ಆಘಾತಕ್ಕೊಳಗಾಗಿತ್ತು. ಈ ಸಂದರ್ಭದಲ್ಲಿ ಭಾರತದಲ್ಲಿ ಕೇವಲ 4 ದಿನಗಳ ಕಲ್ಲಿದ್ದಲು ಉಳಿದಿದೆ, ದೇಶದಲ್ಲಿ ಕೇವಲ 2 ದಿನಗಳ ವಿದ್ಯುತ್ ಪೂರೈಕೆಯನ್ನು ಉಳಿಸಿಕೊಳ್ಳಲು ಕಲ್ಲಿದ್ದಲಿನ ಲಭ್ಯತೆ ಇದೆ ಎನ್ನುವ ವರದಿಗಳು ಪ್ರಸಾರವಾಗತೊಡಗಿದವು. ಅದು ಅತ್ಯಂತ ಸಂಕಷ್ಟದ ಸಂದರ್ಭವಾಗಿತ್ತು. ಆ ತುರ್ತು ಸಂದರ್ಭದಲ್ಲಿ ನೇರವಾಗಿ ರಂಗಕ್ಕಿಳಿದ ಪ್ರಹ್ಲಾದ್ ಜೋಶಿ, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಇಲಾಖೆಗಳ ಮುಖ್ಯಸ್ಥರ ಜೊತೆ ಹಲವು ಸಭೆಗಳನ್ನು ನಡೆಸಿ ಅಭಾವ ಸರಿದೂಗಿಸಲು ಹೆಚ್ಚಿನ ಗಮನ ಕೊಟ್ಟರು. ಭಾರತೀಯ ರೈಲ್ವೇ ಸಹಕಾರದೊಂದಿಗೆ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಸಲು ಕಲ್ಲಿದ್ದಲು ಸರಕು ತುಂಬಿದ ರೈಲನ್ನು ಸಮರೋಪಾದಿಯಲ್ಲಿ ಓಡಿಸಲಾಯಿತು. ದೇಶಾದ್ಯಂತ ವರದಿಯಾದ ಕಲ್ಲಿದ್ದಲು ಕೊರತೆಯ ಮಧ್ಯದಲ್ಲಿ, ವಿಶೇಷ ರೈಲುಗಳ ಮೂಲಕ ಪೂರೈಸಿ ತಾತ್ಕಾಲಿಕ ಅಭಾವ ತಪ್ಪಿಸಲಾಯಿತು. ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಸಲು 4 ಇಂಜಿನ್‌ಗಳನ್ನು ಹೊಂದಿರುವ 4 ಕಿಮೀ ಉದ್ದದ ರ್ಯಾಕ್ ರೈಲು ಬಳಸಿಕೊಂಡಿದ್ದು ಅತ್ಯಂತ ಸಮಯೋಚಿತ ಮತ್ತು ಸೂಕ್ತ ನಿರ್ಣಯ ಎಂದು ಘಟಾನುಘಟಿ ಪರಿಣಿತರೇ ಮೂಗಿನ ಮೇಲೆ ಬೆರಳಿಡುವಂತೆ ಕಾರ್ಯನಿರ್ವಹಿಸಲಾಯಿತು.
ಈಗಾಗಲೇ ಜಾರಿಗೆ ಬಂದಿರುವ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸಿಸ್ಟಮ್ ಕಲ್ಲಿದ್ದಲು ವಲಯದ ಚೇತರಿಕೆಗೆ ಆಕ್ಸಿಜನ್ ನಂತೆ ನೆರವು ನೀಡಿದೆ. ದೇಶದ ಕಲ್ಲಿದ್ದಲು ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಮೋದಿ ಸರ್ಕಾರ ಏಕ ಗವಾಕ್ಷಿ ತೆರವು ಕಾರ್ಯಕ್ರಮ ಪ್ರಾರಂಭಿಸಿದೆ. ೨೦೨೫ರ ಹಣಕಾಸಿನ ವರ್ಷದೊಳಗೆ ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ತಲುಪಲು ಕಲ್ಲಿದ್ದಲಿನ ವಲಯದ ಉತ್ತೇಜನ ಅನಿವಾರ್ಯ ಎಂದು ಕೇಂದ್ರ ಸರ್ಕಾರ ಭಾವಿಸಿದೆ. ಈ ನಿಟ್ಟಿನಲ್ಲಿ ಒಂದಷ್ಟು ಅಂಕಿ ಅಂಶಗಳ ಸಹಿತ ಹೇಳುವಾದರೇ, ಕಳೆದ ಕೆಲವು ವರ್ಷಗಳಲ್ಲಿ ಮೋದಿ ಸರ್ಕಾರ ಕೋಲ್ ಇಂಡಿಯಾ ಲಿಮಿಟೆಡ್‌ನ ಸಾಮರ್ಥ್ಯ ಹೆಚ್ಚಿಸಲು ತೀವ್ರವಾಗಿ ಪ್ರಯತ್ನಿಸಿ ಮತ್ತು ಕೊಂಚ ಮಟ್ಟಿಗೆ ಯಶಸ್ವಿಯಾಗಿರುವುದು ಗಮನಿಸಬಹುದು.
ಕಲ್ಲಿದ್ದಲು ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಲ್ಲಿದ್ದಲು ಉತ್ಪಾದನೆ 2013-14ರಲ್ಲಿ 462.4 ಮೆಟ್ರಿಕ್ ಟನ್ ಇತ್ತು. 2018-19ರ ವೇಳೆಗೆ ಉತ್ಪಾದನಾ ಸಾಮರ್ಥ್ಯ 573.8 ಮೆಟ್ರಿಕ್ ಟನ್‌ಗೆ ಹೆಚ್ಚಳವಾಗಿದೆ ಅಂದರೆ ಶೇ.24 ಹೆಚ್ಚಾಗಿದೆ. ನಮ್ಮಲ್ಲಿ ಕಲ್ಲಿದ್ದಲಿನ ಬೇಡಿಕೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಉತ್ಪಾದಿಸುವ ಸಾಮರ್ಥ್ಯಕ್ಕೆ ಹೋಲಿಸಿದರೆ ಅತಿ ಹೆಚ್ಚು. ಹಾಗಾಗಿ, ಕಲ್ಲಿದ್ದಲು ಬಳಸುವ ಉಷ್ಣ ವಿದ್ಯುತ್ ಸ್ಥಾವರ ಕಂಪನಿಗಳು ಮತ್ತು ಇತರ ಕೈಗಾರಿಕೆಗಳು ಚೀನಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಂದ ಆಮದು ಮಾಡಿಕೊಳ್ಳಲು ಒತ್ತಾಯಿಸುತ್ತವೆ. ಈ ಕಂಪನಿಗಳು ಆಮದು ಮಾಡಿಕೊಳ್ಳಲು ಬಲವಂತಪಡಿಸುತ್ತಿರುವುದು ದೇಶದಲ್ಲಿ ಕಲ್ಲಿದ್ದಲು ನಿಕ್ಷೇಪಗಳ ಕೊರತೆಯ ಕಾರಣದಿಂದಲ್ಲ; ಬದಲಿಗೆ ಈ ವಲಯದ ಮೇಲೆ ಏಕಸ್ವಾಮ್ಯ ಹೊಂದಿದ್ದ ಕೋಲ್ ಇಂಡಿಯಾ ಲಿಮಿಟೆಡ್‌ನ ಗಣಿಗಾರಿಕೆ ಸಾಮರ್ಥ್ಯದ ಕೊರತೆಯ ಕಾರಣದಿಂದ.
ಹೀಗಾಗಿಯೇ ಕೇಂದ್ರ ಸರ್ಕಾರ ಕಲ್ಲಿದ್ದಲಿನ ವಾಣಿಜ್ಯ ಗಣಿಗಾರಿಕೆಗೆ ಅನುಮತಿ ನೀಡಿತು. ಭಾರತವು ವಿಶ್ವದಲ್ಲೇ ಐದನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದೆ. ಅಂದರೆ ಅಂದಾಜು 106 ಶತಕೋಟಿ ಟನ್. ಈ ದೃಷ್ಟಿಯಿಂದ ಕಲ್ಲಿದ್ದಲು ಉದ್ಯಮವನ್ನು ವಾಣಿಜ್ಯಕರಣಗೊಳಿಸಿ ಖಾಸಗಿ ವಲಯದ ಹೂಡಿಕೆ ಪಡೆದುಕೊಳ್ಳುವುದು ನಿಜವಾದ ಆತ್ಮನಿರ್ಭರ ಭಾರತ ಎನ್ನಲಾಗುತ್ತಿದೆ. ಹಾಗೆ ನೋಡಿದರೆ ಚೀನಾ ಸೇರಿದಂತೆ ಪ್ರಪಂಚದ ಅನೇಕ ಭಾಗಗಳು ಗಂಭೀರ ಕಲ್ಲಿದ್ದಲು ಬಿಕ್ಕಟ್ಟಿನಿಂದ ಬಳಲುತ್ತಿವೆ. ಹೀಗಾಗಿಯೇ ವಿದ್ಯುತ್ ಕಡಿತ, ನಗರಗಳಲ್ಲಿ ಬ್ಲ್ಯಾಕೌಟ್ ಮತ್ತು ಕೈಗಾರಿಕೆಗಳ ಸಂಪೂರ್ಣ ಸ್ಥಗಿತ ಉಂಟಾಗಿದೆ. ಆದರೆ ಭಾರತದಲ್ಲಿ, ಕಲ್ಲಿದ್ದಲಿನ ನಿಜವಾದ ಕೊರತೆಯಿಲ್ಲ ಮತ್ತು ದೇಶದಲ್ಲಿ ವಿದ್ಯುತ್ ಬಿಕ್ಕಟ್ಟು ಸಹ ಇಲ್ಲ. ಈಗಾಗಲೇ ಕಲ್ಲಿದ್ದಲು ಸಚಿವಾಲಯದ ಪತ್ರಿಕಾ ಪ್ರಕಟಣೆ ಹೊರಡಿಸಿ, ವಿದ್ಯುತ್ ಸ್ಥಾವರಗಳ ಬೇಡಿಕೆಯನ್ನು ಪೂರೈಸಲು ದೇಶದಲ್ಲಿ ಸಾಕಷ್ಟು ಕಲ್ಲಿದ್ದಲು ಲಭ್ಯವಿದೆ ಎಂದು ಹೇಳಿದೆ. ವಿದ್ಯುತ್ ಸರಬರಾಜಿನಲ್ಲಿ ಅಡ್ಡಿಯಾಗುವ ಯಾವುದೇ ಭಯ ಬೇಡ. ವಿದ್ಯುತ್ ಸ್ಥಾವರಕ್ಕೆ ಅಗತ್ಯವಿರುವ ಇಂಧನ ಸಂಗ್ರಹ ಸಾಕಷ್ಟಿದೆ. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) 400 ಲಕ್ಷ ಟನ್‌ಗಳಿಗಿಂತ ಹೆಚ್ಚಿನ ಕಲ್ಲಿದ್ದಲು ಉತ್ಪಾದಿಸಿದೆ ಎನ್ನುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ ಪ್ರಹ್ಲಾದ್ ಜೋಶಿ.
ಕಲ್ಲಿದ್ದಲು ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ, ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆಗಳು) ಕಾಯಿದೆ ಮತ್ತು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸರ್ಕಾರವು 41 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಖುದ್ದು ಪ್ರಧಾನಿಗಳೇ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಭಾರತ ವಿಶ್ವದ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದೆ, ಆದರೂ ಈವರೆಗೂ ಜಿಡಿಪಿಗೆ ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದ ಕೊಡುಗೆ ಕೇವಲ 2% ಕ್ಕಿಂತ ಕಡಿಮೆ. ಈ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತ ಸಂಕಲ್ಪದಡಿ ರಾಷ್ಟ್ರದ ಜಿಡಿಪಿಗೆ ಶೇ.5%ರಷ್ಟು ಕೊಡುಗೆ ನೀಡಲು ಕಲ್ಲಿದ್ದಲ ಗಣಿಗಾರಿಕೆ ಉದ್ಯಮ ಹೆಚ್ಚಿನ ಪ್ರಯೋಗಗಳೊಂದಿಗೆ ಕಾರ್ಯನಿರತವಾಗಿದೆ.
ಕಲ್ಲಿದ್ದಲು ವಲಯದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಠಿ ಮತ್ತು ಹೂಡಿಕೆಗೆ ಬೃಹತ್ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಇಂಧನ ಭದ್ರತೆಗೆ ಬಲವಾದ ಅಡಿಪಾಯ ಹಾಕಲು ಭಾರತ ಅನಿಲ ಸ್ವಾವಲಂಭನೆಗೆ ಹೆಚ್ಚಿನ ಆಧ್ಯತೆ ನೀಡುತ್ತಿದೆ. ಇಲ್ಲಿ ಕಲ್ಲಿದ್ದಲು ಗಣಿಗಾರಿಕೆಯಿಂದ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಮಾರುಕಟ್ಟೆಯಲ್ಲಿ ಗರಿಷ್ಠ ಕಲ್ಲಿದ್ದಲು ಲಭ್ಯವಾಗುವಂತೆ ನೋಡಿಕೊಳ್ಳಬೇಕಾಗಿದೆ. ಬ್ಲಾಕ್ ಡೈಮೆಂಡ್ ಎಂದೇ ಕರೆಸಿಕೊಳ್ಳುವ ಕಲ್ಲಿದ್ದಲು, ಇಂದನ ಮುಂದುವರೆಯುತ್ತಿರುವ ದೇಶಗಳ ಆರ್ಥಿಕ ಮತ್ತು ಇಂದನ ಸ್ವಾವಲಂಭನೆಗೆ ನಿಜಕ್ಕೂ ಅತ್ಯುತ್ತಮ ಆಯ್ಕೆ ಎನ್ನುವ ಮಾತುಗಳಿವೆ.
2014ರಲ್ಲಿ, ಪ್ರಮುಖ ವಿದ್ಯುತ್ ಸ್ಥಾವರಗಳ ಮೂರನೇ ಎರಡರಷ್ಟು ಪ್ರಮುಖ ಕಲ್ಲಿದ್ದಲು ದಾಸ್ತಾನುಗಳನ್ನು ಏಳು ದಿನಗಳಿಗಿಂತ ಕಡಿಮೆಯಿತ್ತು. ಅಂತಹ ಸಂದರ್ಭದಿಂದ ಸಾಕಷ್ಟು ಮುಂದೆ ಬಂದು ಬಹಳಷ್ಟು ಚೇತರಿಕೆ ಕಂಡಿರುವ ಈ ಉದ್ಯಮ ೨೦೨೦ ಹಣಕಾಸಿನ ವರ್ಷದಲ್ಲಿ 729 ಮೆಟ್ರಿಕ್ ಟನ್‌ಗಳಷ್ಟು ದಾಖಲೆಯ ಉತ್ಪಾದನೆ ಸಾಧಿಸಿ ಜಗತ್ತಿನ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ರಾಷ್ಟ್ರವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗ ದೇಶದಲ್ಲಿನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು ಅತ್ಯಧಿಕ ಮಟ್ಟಕ್ಕೆ ಏರಿದೆ.
1973 ರಲ್ಲಿ ಕಲ್ಲಿದ್ದಲಿನ ರಾಷ್ಟ್ರೀಕರಣವಾಯಿತು. ದೇಶೀಯ ಕಲ್ಲಿದ್ದಲನ್ನು ಸಾರ್ವಜನಿಕ ವಲಯದ ಕಂಪನಿಗಳು ಮಾತ್ರ ಗಣಿಗಾರಿಕೆ ನಡೆಸಬಹುದು. ಕೋಲ್ ಇಂಡಿಯಾ ಲಿಮಿಟೆಡ್ ವಿಶ್ವದ ಅತಿದೊಡ್ಡ ಕಲ್ಲಿದ್ದಲು ಗಣಿ ಉದ್ಯಮಿಯಾಗಿದೆ. ತನ್ನ ಅವಿರತ ಪ್ರಯತ್ನಗಳಿಂದ ಕೋಲ್ ಇಂಡಿಯಾ ಲಿಮಿಟೆಡ್ ಕಳೆದ ಆರು ವರ್ಷಗಳಲ್ಲಿ ಅಭೂತಪೂರ್ವ 140 ಮೆಟ್ರಿಕ್ ಟನ್ ಉತ್ಪಾದನಾ ಹೆಚ್ಚಳ ದಾಖಲಿಸಿದೆ. ದೇಶದ ಇಂಧನ ಭದ್ರತೆ ಖಾತ್ರಿಪಡಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಕಲ್ಲಿದ್ದಲು ಕಂಪನಿಗಳು ಉತ್ಪಾದನೆ, ಸುರಕ್ಷತೆ ಮತ್ತು ಆದ್ಯತೆಯ ಸುಧಾರಣೆಗೆ ಶ್ರಮಿಸುತ್ತಿದ್ದರೂ, ದಿನೇ ದಿನೇ ದೇಶದ ಕಲ್ಲಿದ್ದಲು ಬೇಡಿಕೆ ಅತ್ಯಂತ ವೇಗದ ದರದಲ್ಲಿ ಬೆಳೆಯುತ್ತಿದೆ. ೨೦೨೦ರ ಹಣಕಾಸಿನ ವರ್ಷದಲ್ಲಿ ನಮ್ಮ ರಾಷ್ಟ್ರ ೨೫೧ ಮೆಟ್ರಿಕ್ ಟನ್ ಕಲ್ಲಿದ್ದಲು ಆಮದು ಮಾಡಿಕೊಂಡಿದೆ, ಅದರ ಒಟ್ಟು ಮೌಲ್ಯ 1,58,865 ಕೋಟಿ ರೂಪಾಯಿ. ಇದೇ ಕಾರಣಕ್ಕೆ ರಾಷ್ಟ್ರದ ಅಗತ್ಯಗಳನ್ನು ಪೂರೈಸಲು ಖಾಸಗಿ ವಲಯಕ್ಕೆ ಅನುವು ಮಾಡಿಕೊಡುವ ಪ್ರಯತ್ನಗಳಾಗಿವೆ.
ಈವರೆಗೆ ನಿಷೇಧಿಸಲ್ಪಟ್ಟಿದ್ದ ಜಾಗತಿಕ ಕಲ್ಲಿದ್ದಲು ಗಣಿಗಾರಿಕೆ ಸಂಸ್ಥೆಗಳು ಈಗ ಹೂಡಿಕೆ ಮಾಡಲು ಕೇಂದ್ರ ಕೆಲವು ಮಾನದಂಡಗಳ ಸಹಿತ ಅನುಮತಿ ನೀಡಿದೆ. ಹೀಗಾದಾಗ ದೇಶೀಯ ಕಲ್ಲಿದ್ದಲು ಪೂರೈಕೆ ಈಗ ಇರುವ ಬೇಡಿಕೆಗಿಂತ ಕಡಿಮೆಯಾಗುತ್ತದೆ. ಅಂದರೆ ಸುಮಾರು 135 ಮೆಟ್ರಿಕ್ ಟನ್ ಕಲ್ಲಿದ್ದಲು ಆಮದು ಕಡಿಮೆ ಮಾಡಬಹುದು ಅನ್ನುವುದು ಪರಿಣಿತರ ವಾದ. ಉಕ್ಕು, ವಿದ್ಯುತ್ ಮತ್ತು ಅಲ್ಯೂಮಿನಿಯಂನಂತಹ ಕಲ್ಲಿದ್ದಲು ಬಳಸುವ ವಲಯಗಳ ಮೇಲೆ ನಾಕ್-ಆನ್ ಪರಿಣಾಮ ಗಮನಾರ್ಹ. ಕಲ್ಲಿದ್ದಲು ಹರಾಜು ಪ್ರಕೃಯೆಯಲ್ಲಿ ಸಂಗ್ರಹವಾಗುವ ಒಟ್ಟು ಆದಾಯ ಮತ್ತು ದೇಶದ ಇಂದನ ಅವಲಂಬನೆಯ ಪರಿಹಾರ ಎರಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ಜಾಗತಿಕ ಖಾಸಗಿ ಹೂಡಿಕೆಗಾಗಿ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಇಲ್ಲಿಯವರೆಗೆ, ಕಲ್ಲಿದ್ದಲು ಗಣಿಗಾರಿಕೆಗೆ ಸುಮಾರು 18 ಅನುಮತಿಗಳ ಅಗತ್ಯವಿತ್ತು ಮತ್ತು ಹೀಗಾಗಿಯೇ ಬೃಹತ್ ಕೈಗಾರಿಕೆಗಳು ಹಿಂದೆ ಸರಿದಿದ್ದವು. ವಿಶ್ವದ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದ್ದರೂ ಸಹ ಭಾರತ ವಿದೇಶಗಳಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಬೇಕಾಗಿತ್ತು.
ಸೆಪ್ಟೆಂಬರ್ 2021 ರವರೆಗೆ ದೇಶೀಯ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯು ಸುಮಾರು 24% ರಷ್ಟು ಬೆಳೆದಿದೆ. ವಿದ್ಯುತ್ ಸ್ಥಾವರಗಳಲ್ಲಿ ದಿನಕ್ಕೆ ಸರಾಸರಿ ಕಲ್ಲಿದ್ದಲು ಅಗತ್ಯವು ಸುಮಾರು 18.5 ಲಕ್ಷ ಟನ್‌ಗಳಷ್ಟಿದ್ದರೆ, ಪ್ರತಿದಿನ ಕಲ್ಲಿದ್ದಲು ಪೂರೈಕೆ ದಿನಕ್ಕೆ ಸುಮಾರು 17.5 ಲಕ್ಷ ಟನ್‌ಗಳಷ್ಟಿದೆ. ವಿದ್ಯುತ್ ಸ್ಥಾವರಗಳಲ್ಲಿ ಲಭ್ಯವಿರುವ ಕಲ್ಲಿದ್ದಲು ರೋಲಿಂಗ್ ಸ್ಟಾಕ್ ಆಗಿದ್ದು, ಇದು ಕಲ್ಲಿದ್ದಲು ಕಂಪನಿಗಳಿಂದ ದಿನನಿತ್ಯದ ಪೂರೈಕೆಯಿಂದ ಮರುಪೂರಣಗೊಳ್ಳುತ್ತದೆ. ಆದ್ದರಿಂದ, ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ದಾಸ್ತಾನು ಖಾಲಿಯಾಗುವ ಆತಂಕದ ಸ್ಥಿತಿ ಇಲ್ಲವೇ ಇಲ್ಲ ಎಂದು ಸಚಿವಾಲಯ ದೃಢೀಕರಿಸಿತ್ತು. ಇತ್ತೀಚೆಗಷ್ಟೆ ಕೇಂದ್ರದ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಅಶ್ವಿನಿ ವೈಷ್ಣವ್ ಜಿ ಮತ್ತು ರಾಜ್ ಕುಮಾರ್ ಸಿಂಗ್ ಜೊತೆಗೆ ಸಭೆ ನಡೆಸಿ, ರೈಲು ಮೋಡ್ ಮೂಲಕ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಕಲ್ಲಿದ್ದಲು ಪೂರೈಕೆ ಹೆಚ್ಚಿಸುವ ಕುರಿತು ಗಂಭೀರ ಚರ್ಚೆ ನಡೆಸಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.
ಮೂಲತಃ ಧಾರವಾಡದ ಸಂಸದರಾಗಿರುವ ಪ್ರಹ್ಲಾದ್ ಜೋಶಿ ಆಡಳಿತಾತ್ಮಕವಾಗಿ ಅತ್ಯಂತ ನಿಖರವಾಗಿ ನಿರ್ಧಾರ ತೆಗೆದುಕೊಂಡು ಕಾರ್ಯಾಚರಣೆಗೆ ಇಳಿಯುವ ಸಾಮರ್ಥ್ಯ ಉಳ್ಳವರು ಎನ್ನುವುದು ಈ ಕಲ್ಲಿದ್ದಲ ನಿರ್ವಹಣೆ ಸಾಬೀತು ಮಾಡಿದೆ. ಪ್ರಹ್ಲಾದ್ ಜೋಶಿಯವರ ಕಾರ್ಯವೈಖರಿಗೆ ಜಾಗತಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಮುಂಬರುವ ದಿನಗಳಲ್ಲಿ ಕಲ್ಲಿದ್ದಲು ವಲಯ ದೇಶದ ಆರ್ಥಿಕತೆಗೆ ತನ್ನದೇ ಆದ ಮಹತ್ವದ ಕೊಡುಗೆ ನೀಡುತ್ತದೆ. ಒಂದು ಕಡೆ ಕೋಲ್ ಇಂಡಿಯಾ ಉತ್ಪಾದನಾ ಸಾಮರ್ಥ್ಯ ವೃದ್ಧಿಸುವ ಜೊತೆಗೆ ಖಾಸಗಿ ವಲಯದ ಕಾರ್ಯಾಚರಣೆಯಿಂದಲೂ ಆರ್ಥಿಕತೆಯ ಉತ್ತೇಜನಗೆ ಸಾಕಷ್ಟು ಕೊಡುಗೆ ನಿರೀಕ್ಷಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿರುವ ಜೋಶಿ, ಹಲವು ದೂರದೃಷ್ಟಿಯ ಯೋಜನೆಗಳನ್ನು ಜಾರಿ ಮಾಡಲು ಉತ್ಸುಕರಾಗಿದ್ದಾರೆ. ಭವಿಷ್ಯದಲ್ಲಿ ಭಾರತ ಕಲ್ಲಿದ್ದಲು ಸ್ವಾವಲಂಬನೆ ಸಾಧಿಸಿದ್ದೇ ಆದರೆ ಅದರ ಹಿಂದಿನ ಸಂಕಲ್ಪ ಮತ್ತು ಕರ್ತೃತ್ವ ಶಕ್ತಿ ಪ್ರಹ್ಲಾದ್ ಜೋಶಿಯವರನ್ನು ಇತಿಹಾಸ ಖಂಡಿತಾ ನೆನಪಿಸಿಕೊಳ್ಳಲೇಬೇಕು.
-ವಿಭಾ