ದೆಹಲಿ: ದೆಹಲಿಯಲ್ಲಿ ಉಬರ್ ಆಟೋ ರಿಕ್ಷಾದಲ್ಲಿ ಚಾಲಕನೊಬ್ಬ ಪತ್ರಕರ್ತೆಯ ಜೊತೆ ಅನುಚಿತವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆರೋಪಿಗಳನ್ನು ಪತ್ತೆ ಹಚ್ಚುವ ಮತ್ತು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.”02.03.23 ರಂದು ರಾತ್ರಿ 11.00 ಗಂಟೆಗೆ, ಭಾರತ್ ನಗರದ ನಿವಾಸಿಯೊಬ್ಬರು ಪೊಲೀಸ್ ಠಾಣೆ NFC ಅನ್ನು ಸಂಪರ್ಕಿಸಿ ಒಬ್ಬ ಚಾಲಕನ ವಿರುದ್ಧ ದೂರು ದಾಖಲಿಸಿದರು. ಆಕೆ 01.03.23 ರಂದು ಸಂಜೆ 4.40 ಕ್ಕೆ NFC ಯಿಂದ ಮಾಳವಿಯಾ ನಗರಕ್ಕೆ ಪ್ರಯಾಣಿಸುವಾಗ ಆತ ಅಸಭ್ಯವಾಗಿ ವರ್ತಿಸಿದ್ದು ತನ್ನನ್ನು ಕೆಟ್ಟ ರೀತಿಯಲ್ಲಿ ಒಂದೇ ಸಮನೆ ನೋಡುತ್ತಿದ್ದ ಎಂದು ಮಹಿಳೆ ದೂರಿರುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ.
ಪೊಲೀಸರು ಐಪಿಸಿ ಸೆಕ್ಷನ್ 509 (ಮಹಿಳೆಯರ ನಮ್ರತೆಗೆ ಅವಮಾನ ಮಾಡುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಮತ್ತು ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ. “ಅದರ ಪ್ರಕಾರ ಪಿಎಸ್ ಎನ್ಎಫ್ಸಿಯಲ್ಲಿ ಎಫ್ಐಆರ್ ನಂ. 92/23 ಯು/ಎಸ್ 509 ಐಪಿಸಿ ದಿನಾಂಕ 02.03.23 ರ ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ. ವಾಹನದ ಮಾಲೀಕರು ಮೊಹಮ್ಮದ್ ಯೂನಸ್ ಖಾನ್, ಎ-439 ನೆಹರು ಕ್ಯಾಂಪ್ ಗೋವಿಂದಪುರಿ ದೆಹಲಿಯ ನಿವಾಸಿ. ಅಪರಾಧಿ ಚಾಲಕನನ್ನು ಬಂಧಿಸಲು ಖಾನ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದಕ್ಕೂ ಮುನ್ನ ದೆಹಲಿಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ದೆಹಲಿಯಲ್ಲಿ ಉಬರ್ ಆಟೋದಲ್ಲಿ ಮಹಿಳಾ ಪತ್ರಕರ್ತೆಯ ಮೇಲೆ ದೌರ್ಜನ್ಯ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಉಬರ್ ಇಂಡಿಯಾ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ಗುರುವಾರ ಈ ಬಗ್ಗೆ ಟ್ವೀಟ್ ಮಾಡಿದ್ದ ಸ್ವಾತಿ ಮಲಿವಾಲ್ ದೆಹಲಿಯಲ್ಲಿ ಉಬರ್ ಆಟೋದಲ್ಲಿ ಪತ್ರಕರ್ತೆಯ ಮೇಲೆ ದೌರ್ಜನ್ಯ ನಡೆಸಿದ ದುರದೃಷ್ಟಕರ ಘಟನೆಯ ಬಗ್ಗೆ ಉಬರ್ ಇಂಡಿಯಾ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ನೀಡಲಾಗಿದೆ. ಮಹಿಳೆಯರ ಸುರಕ್ಷತೆ ಬಗ್ಗೆ ಉಬರ್ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ಕೇಳಲಾಗಿದೆ ಎಂದಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಸಂತ್ರಸ್ತ ಮಹಿಳೆ, “ನಾನು ಮಾಳವೀಯ ನಗರದಲ್ಲಿರುವ ನನ್ನ ಸ್ನೇಹಿತನ ಸ್ಥಳಕ್ಕೆ ಹೋಗುತ್ತಿದ್ದೆ ನಾನು ಎನ್ಎಫ್ಸಿಯಿಂದ ಆಟೋ ಹತ್ತಿದೆ. ನಾನು ಉಬರ್ ಮೂಲಕ ಆಟೋವನ್ನು ಬುಕ್ ಮಾಡಿದ್ದೆ. ನಾನು ಆಟೋದಲ್ಲಿ ಒಬ್ಬಳೇ ಇದ್ದು ಸಂಗೀತವನ್ನು ಕೇಳುತ್ತಿದ್ದೆ. ಆರಂಭದಲ್ಲಿ ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ, ಸ್ವಲ್ಪ ಸಮಯದ ನಂತರ ನನಗೆ ಅರ್ಥವಾಯಿತು. ಆಟೋ ಡ್ರೈವರ್ ಎಡಭಾಗದ ಕನ್ನಡಿಯಲ್ಲಿ ನನ್ನನ್ನು ನೋಡುತ್ತಿದ್ದಾನೆ ಎಂದು ನನಗೆ ಅರ್ಥವಾಯಿತು, ನನ್ನ ಸ್ತನಗಳು ಕನ್ನಡಿಯಲ್ಲಿ ಗೋಚರಿಸುತ್ತವೆ. ಅವನು ನನ್ನನ್ನು ನೋಡುತ್ತಿದ್ದನು, ಅಸಹನೀಯ ಎಂದೆನಿಸಿ ನಾನು ಮತ್ತೊಂದೆಡೆಗೆ ತಿರುಗಿದರೆ ಆತನೂ ಅದೇ ಕಡೆಗೆ ತಿರುಗಿದ. ನಂತರ ಬಲಭಾಗದ ಕನ್ನಡಿಯಲ್ಲಿ ನನ್ನನ್ನು ನೋಡಲು ಪ್ರಾರಂಭಿಸಿದನು.
ಇದಾದ ನಂತರ, ನಾನು ಅವನಿಗೆ ಕಾಣಿಸುವುದಿಲ್ಲ ಎಂದು ನಾನು ಎಡ ಮೂಲೆಗೆ ತೆರಳಿದೆ, ಆದರೆ ಅವನು ಹಿಂತಿರುಗಿ ನನ್ನತ್ತ ನೋಡಲಾರಂಭಿಸಿದ. ನಾನು ಅವನಿಗೆ ಬೆದರಿಕೆ ಹಾಕಿದೆ. ನಾನು ದೂರು ನೀಡುತ್ತೇನೆ ಎಂದು ಹೇಳಿದೆ.ಅವನು ವಿರೋಧಿಸಲಿಲ್ಲ. ಹಾಗಾಗಿ ನಾನು ಉಬರ್ ಆ್ಯಪ್ ಓಪನ್ ಮಾಡಿ ಅದರಲ್ಲಿರುವ ನಂಬರ್ ಕ್ಲಿಕ್ ಮಾಡಿದೆ. ಆದರೆ ನೆಟ್ವರ್ಕ್ ಸಮಸ್ಯೆಯಿಂದ ಸಂಪರ್ಕಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾನು ಮತ್ತೊಮ್ಮೆ ಸಂಖ್ಯೆಗೆ ಕರೆ ಮಾಡಿದೆ. ಈ ಬಾರಿಯೂ ಅಪ್ಲಿಕೇಶನ್ನಲ್ಲಿನ ಹಲವಾರು ದೋಷಗಳಿಂದಾಗಿ ಕಂಪನಿಯನ್ನು ಸಂಪರ್ಕಿಸಲು ನನಗೆ ಸಾಧ್ಯವಾಗಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ನಾನು ರಾತ್ರಿ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದೇನೆ. ನನ್ನ ಟ್ವೀಟ್ ವೈರಲ್ ಆದ ನಂತರ ದೆಹಲಿ ಮಹಿಳಾ ಆಯೋಗ ಫಾಲೋ ಅಫ್ ಮಾಡಿದೆ. ನಾನು ಆಯೋಗಕ್ಕೆ ಮೌಖಿಕ ಮತ್ತು ಲಿಖಿತ ದೂರು ದಾಖಲಿಸಿದ್ದೇನೆ. ಇದೆಲ್ಲದರ ನಂತರ ನಾನು ಪೊಲೀಸ್ ದೂರು ದಾಖಲಿಸಲು ಬಂದಿದ್ದೇನೆ” ಎಂದು ಅವರು ಹೇಳಿದರು.
“ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ. ನಾನು ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು” ಎಂದು ಅವರು ಹೇಳಿದರು.
ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರಿಗೆ ಭದ್ರತೆ ನೀಡಬೇಕು ಎಂದ ಅವರು”ಈ ಘಟನೆಯು ನನ್ನೊಂದಿಗೆ ಹಗಲು ಹೊತ್ತಿನಲ್ಲಿ ಸಂಭವಿಸಿದೆ. ಹಗಲು ಹೊತ್ತಿನಲ್ಲಿ ಅವನನ್ನು ಎದುರಿಸಲು ನನಗೆ ಅವಕಾಶವಿತ್ತು. ಘಟನೆಯು ರಾತ್ರಿಯಲ್ಲಿ ಸಂಭವಿಸಿದರೆ ಏನು ಮಾಡಬೇಕಿತ್ತು? ಉಬರ್ ಅಪ್ಲಿಕೇಶನ್ ಕೆಲಸ ಮಾಡಲಿಲ್ಲ. ಸರಿಯಾದ ವ್ಯವಸ್ಥೆ ಬೇಕು ಮತ್ತು ಅವರು ನನಗೆ ಮತ್ತೆ ಕರೆ ಮಾಡಬೇಕಿತ್ತು. ನಾನು ಘಟನೆಯ ವಿರುದ್ಧ ಧ್ವನಿ ಎತ್ತಿದಾಗ, ಕಂಪನಿಯು ನನ್ನನ್ನು ಸಂಪರ್ಕಿಸಿತು ಎಂದಿದ್ದಾರೆ.