ಬೆಳಗಾವಿ: ಬೆಳಗಾವಿ ಜಿಲ್ಲೆ ಸೇರಿದಂತೆ ಗೋಕಾಕ್ ತಾಲೂಕಿನ ಹಲವೆಡೆ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ್ ಪೊಲೀಸರು ಇಬ್ಬರು ಅಂತರಾಜ್ಯ ಬೈಕ್ ಕಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ.
ಇತ್ತಿಚೆಗೆ ಗೋಕಾಕ್ ತಾಲೂಕಿನ ಕುಂದರಗಿ ಗ್ರಾಮದ ಲಕ್ಷ್ಮೀದೇವಿ ದೇವಸ್ತಾನದ ಬಳಿ ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿ ಅಂಕಲಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೈಕ್ ಕಳ್ಳತನ ಪ್ರಕರಣಗಳನ್ನು ಗಂಭಿರವಾಗಿ ಪರಿಗಣಿಸಿದ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್ ಮಾರ್ಗದರ್ಶನದಲ್ಲಿ ಗೋಕಾಕ್ ಸಿಪಿಐ ಗೋಪಾಲ್ ರಾಠೋಡ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಪ್ರಕರಣ ಸಂಬಂಧ ಕಾರ್ಯಾಚರಣೆ ಚುಕುರುಗೊಳಿಸಿದ್ದ ಸಿಪಿಐ ಗೋಪಾಲ್ ರಾಠೋಡ್ ನೇತೃತ್ವದ ತಂಡ ಕೊನೆಗೂ ಇಬ್ಬರು ಅಂತರಾಜ್ಯ ಬೈಕ್ ಕಳ್ಳರನ್ನು ಬಂಧಿಸಿ, ಬಂಧಿತರಿಂದ 8.25 ಲಕ್ಷ ಮೌಲ್ಯದ 23 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಕೊಲ್ಲಾಪುರ ಮೂಲದ ಸಂತೋಷ ರಾಮಚಂದ್ರ ನಿಶಾನೆ ಮತ್ತು ಗೋಕಾಕ್ ತಾಲೂಕಿನ ತೆಳಗಿನಹಟ್ಟಿ ಗ್ರಾಮದ ಭರಮಪ್ಪ ಯಲ್ಲಪ್ಪ ಕೊಪ್ಪದ ಎಂದು ಗುರುತಿಸಲಾಗಿದೆ.
ರಸ್ತೆ ಬದಿ ಬೈಕ್ ನಿಲ್ಲಿಸುವಾಗ ನಿಮ್ಮ ಬೈಕ್ ಗಳನ್ನು ಸರಿಯಾಗಿ ಹ್ಯಾಂಡಲ್ ಲಾಕ್ ಮಾಡಿ. ಸಾದ್ಯವಾದಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಇರುವ ಕಡೆ ಬೈಕ್ ಗಳನ್ನು ನಿಲ್ಲಿಸಿ.
ಸಂಜೀವ್ ಪಾಟೀಲ್, ಬೆಳಗಾವಿ ಎಸ್ಪಿ.
ಇನ್ನು ಸಿಪಿಐ ಗೋಪಾಲ್ ರಾಠೋಡ್ ಮತ್ತು ತಂಡದ ಕಾರ್ಯವೈಖರಿಯನ್ನು ಬೆಳಗಾವಿ ಎಸ್ಪಿ, ಅಡಿಶನಲ್ ಎಸ್ಪಿ ಮತ್ತು ಡಿಎಸ್ಪಿ ಗೋಕಾಕ್ ಅವರು ಶ್ಲಾಘಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಪಿಐ ಗೋಪಾಲ್ ರಾಠೋಡ್ ಅವರಿಗೆ ಗೋಕಾಕ್ ಗ್ರಾಮೀಣ ಪಿಎಸ್ಐ ಕಿರಣ ಮೋಹಿತೆ, ಅಂಕಲಗಿ ಪಿಎಸ್ಐ ಎಚ್.ಡಿ.ಯರಜರ್ವಿ, ಸಿಬ್ಬಂದಿಗಳಾದ ಎಸ್.ಬಿ.ಕಸ್ತೂರಿ, ಎಮ್.ಬಿ.ತಳವಾರ್, ಬಿ.ವಿ.ನೇರ್ಲಿ, ವಿಠ್ಠಲ ನಾಯಕ್, ಎಸ್.ಬಿ. ಯಲ್ಲಪ್ಪಗೌಡರ್, ಡಿ.ಜಿ.ಕೊಣ್ಣೂರ, ಎಮ್.ಬಿ.ತಳವಾರ್, ಎಸ್.ಎಚ್.ದೇವರ, ಎಸ್.ಬಿ.ಚಿಪ್ಪಲಕಟ್ಟಿ, ಪಿ.ಕೆ.ಹೆಬ್ಬಾಳ್, ಎಮ್.ಎಮ್.ಹಾಲೊಳ್ಳಿ ಮತ್ತು ಎ.ಆರ್.ಮಾಳಗಿ ಸಾಥ್ ನೀಡಿದ್ದರು.