ದೆಹಲಿ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಭೀಕರ ರೈಲು ದುರಂತ ಸಂಭವಿಸಿದೆ. ಘಟನೆಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಏರುತ್ತಲೇ ಇದೆ. ಅಪಘಾತ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಸಭೆ ಕರೆದಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಲು ಸಭೆ ಕರೆಯಲಾಗಿದ್ದು ಸಂಬಂಧಿತ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಯಲಿದೆ.
ಸಿಕ್ಕ ಮಾಹಿತಿ ಪ್ರಕಾರ, ಪ್ರಧಾನಿ ಮೋದಿಯವರು ಅಪಘಾತ ಸಂಬಂಧ ಚರ್ಚೆ ನಡೆಸಲಿದ್ದು ರಕ್ಷಣೆ, ಚಿಕಿತ್ಸೆ ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಮೀಪದ ಜಿಲ್ಲೆಗಳ ಎಲ್ಲಾ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೂರು ಎನ್ಡಿಆರ್ಎಫ್ ಘಟಕಗಳು, 4 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳು, 15 ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ತಂಡಗಳು, 30 ವೈದ್ಯರು, 200 ಪೊಲೀಸ್ ಸಿಬ್ಬಂದಿ ಮತ್ತು 60 ಆಂಬ್ಯುಲೆನ್ಸ್ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ತಿಳಿಸಿದ್ದಾರೆ