ಕೂಗು ನಿಮ್ಮದು ಧ್ವನಿ ನಮ್ಮದು

ಜಿಲ್ಲಾ ಚುನಾವಣಾಧಿಕಾರಿ, ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ- ಪರಿಶೀಲನೆ

ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಇಂದು ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲಿಗೆ ಯಲಹಂಕದ ಶೇಷಾದ್ರಿಪುರಂ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟಾರೆ 8,802 ಮತಗಟ್ಟೆಗಳಿವೆ. ಈ ಪೈಕಿ ಸುಮಾರು 36,000 ಮತಗಟ್ಟೆ ಅಧಿಕಾರಿಗಳ ನಿಯೋಜನೆ ಮಾಡಿಕೊಂಡಿದ್ದು, ಹೆಚ್ಚುವರಿಯಾಗಿ ಶೇ. 20 ರಷ್ಟು ಅಧಿಕಾರಿಗಳು ಸೇರಿದಂತೆ ಸುಮಾರು 41,000 ಸಾವಿರ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು. ನಗರದ 4 ಅಪರ ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿರುವ ಮಸ್ಟರಿಂಗ್ ಕೇಂದ್ರಗಳಿಗೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ಬಂದು ಮತಗಟ್ಟೆಗಳಿಗೆ ಅಗತ್ಯವಿರುವ ಇವಿಎಂ, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್, ಎಲ್ಲಾ ಸಾಮಗ್ರಿಗಳನ್ನು ತೆಗೆದುಕೊಂಡು ಬಿ.ಎಂ.ಟಿ.ಸಿ, ಕೆ.ಎಸ್‌.ಆರ್.ಟಿ.ಸಿ, ಇತರೆ ವಾಹನಗಳ ಮೂಲಕ ಮತಗಟ್ಟೆಗಳಿಗೆ ತೆರಳಲಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲೂ ವಸತಿ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ‌‌ ಎಂದು ತಿಳಿಸಿದರು.

ನಾಳೆ ಮೇ 10 ಬೆಳಗ್ಗೆ 7.00 ರಿಂದ ಸಂಜೆ 6.00 ಗಂಟೆಯವರೆಗೆ ಮತದಾನ ಪ್ರಾರಂಭವಾಗಲಿದ್ದು, ಅದಕ್ಕಿಂತ ಮುಂಚಿತವಾಗಿ 5.30ಕ್ಕೆ ಅಣುಕು ಮತದಾನ ಪ್ರಾರಂಭವಾಗಲಿದೆ. ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಕನಿಷ್ಠ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಎಲ್ಲಾ ಮಸ್ಟರಿಂಗ್ ಕೇಂದ್ರಗಳಿಂದ ಬ್ಯಾಲೆಟ್ ಯುನಿಟ್(ಇವಿಎಂ), ಕಂಟ್ರೋಲ್ ಯುನಿಟ್(ಸಿಯು), ವಿವಿ ಪ್ಯಾಟ್ ಗಳನ್ನು ಮತಗಟ್ಟೆಗಳಿಗೆ ತಲುಪಿಲು ಈಗಾಗಲೇ ರೂಟ್ ಸಿದ್ದಪಡಿಸಿಕೊಳ್ಳಲಾಗಿದೆ. ಆ ಪ್ರಕಾರ ಒಂದು ಬಸ್ ನಲ್ಲಿ 5 ರಿಂದ 6 ಮಟಗಟ್ಟೆಗಳ ಅಧಿಕಾರಿಗಳು ತೆರಳಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಯ ನಂತರ ಮತಗಟ್ಟೆಗಳಿಗೆ ತೆರಳಿದ್ದಾರೆ ಎಂದು ಹೇಳಿದರು.

ಅಣುಕು ಮತದಾನದ ವೇಳೆ ಇವಿಎಂ ನಲ್ಲಿ ಲೋಪದೋಷಗಳು ಕಂಡುಬಂದರೆ ಸೆಕ್ಟರ್ ಮೆಜಿಸ್ಟ್ರೇಟ್ ಮೂಲಕ 5/6 ಮತಗಟ್ಟೆಗಳಿಗೆ ನಿಯೋಜನೆ ಮಾಡಿರುವಂತಹ ಮಾರ್ಗ ಅಧಿಕಾರಿಯು ಪರ್ಯಾಯ ವ್ಯವಸ್ಥೆ ಮಾಡಲಿದ್ದಾರೆ ಎಂದು ತಿಳಿಸಿದರು. ಮತಗಟ್ಟೆ ಅಧಿಕಾರಿಗಳಿಗೆ ಕಿಟ್ ವಿತರಣೆ:
ನಗರದ 28 ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆ ಅಧಿಕಾರಿಗಳು, ಇವಿಎಂ, ಸಿಯು, ವಿವಿ ಪ್ಯಾಟ್, ಮತದಾನದ ದಿನ ಅಗತ್ಯವಿರುವ ಎಲ್ಲಾ ರೀತಿಯ ಸಾಮಗ್ರಿಗಳು, ಮತಗಟ್ಟೆಗಳಲ್ಲಿ ರಾತ್ರಿ ಉಳಿಯಲು‌ ಮತಗಟ್ಟೆ ಅಧಿಕಾರಿಗಳಿಗೆ ಬೇಕಾದಂತಹ ವ್ಯವಸ್ಥೆ ಹಾಗೂ ಅವಶ್ಯಕ ಸಾಮಗ್ರಿಗಳ ಕಿಟ್ ಗಳ ವಿತರಣೆ ಮಾಡಿ ಮಧ್ಯಾಹ್ನದ ನಂತರ ಬಿ.ಎಂ.ಟಿ.ಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಮೂಲಕ ಮತಗಟ್ಟೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ.

ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ:
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿರುವ ಮಸ್ಟರಿಂಗ್ ಕೇಂದ್ರಗಳ ಪೈಕಿ, ಇದುವರೆಗೆ ಶೇಷಾದ್ರಿಪುರಂ ಕಾಲೇಜು(ಯಲಹಂಕ), ಬಿಇಎಲ್ ಹೈ ಸ್ಕೂಲ್(ಬ್ಯಾಟರಾಯನಪುರ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ದಾಸರಹಳ್ಳಿ), ವಿದ್ಯಾ ವರ್ಧಕ ಸಂಘ(ಮಹಾಲಕ್ಷ್ಮಿ ಲೇಔಟ್)ದ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆಯ ವೇಳೆ ಯಲಹಂಕ ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ದಾಸರಹಳ್ಳಿ ಜಂಟಿ ಆಯುಕ್ತರಾದ ಜಗದೀಶ್, ಚುನಾವಣಾಧಿಕಾರಿ ವಿಜಯ್ ಕುಮಾರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!