ಉಷ್ಣ ಜ್ವರ:
ದೇಹದಲ್ಲಿ ಉಷ್ಣವೃದ್ಧಿಯಾಗುವುದರಿಂದ, ಬಿಸಿಲಿನಲ್ಲಿ ಹೆಚ್ಚು ಸಮಯ ಇರುವುದರಿಂದ, ಶೀತದ ಸ್ಥಳದಿಂದ ಇದ್ದಕ್ಕಿದ್ದಂತೆ ಉಷ್ಣ ವಾತಾವರಣವಿರುವ ಸ್ಥಳಕ್ಕೆ ಬರುವುದರಿಂದ, ದೇಹದಲ್ಲಿ ವಾಯುಪ್ರಕೋಪಿತವಾಗುವುದರಿಂದ, ವಿರುದ್ಧ ಪ್ರಕೃತಿಯ ಆಹಾರ ಸೇವನೆಯಿಂದ; ಉಷ್ಣ ಪ್ರಕೃತಿಯ ಆಹಾರ ಸೇವನೆಯಿಂದ, ಉಷ್ಣದ ಜ್ವರ ಏರುತ್ತದೆ. ಈ ಜ್ವರದಲ್ಲಿ ಗಂಟಲು, ಮೂಗು ಮತ್ತು ತುಟಿಗಳು ಒಣಗಿಹೋಗುತ್ತದೆ. ಅಧಿಕ ದಾಹ ವಾಗುತ್ತದೆ ಮತ್ತು ಬೆವರು ಸುರಿಯತೊಡಗುತ್ತದೆ.ಬಾಯಿಯಲ್ಲಿ ವಗರು ಅನುಭವವಾಗುತ್ತದೆ. ತಲೆಸುತ್ತಿ ಬರುತ್ತದೆ. ಕೆಲವೊಮ್ಮೆ ಪ್ರಜ್ಞೆ ತಪ್ಪುತ್ತದೆ ಹಾಗೂ ನಿದ್ರೆ ಹತ್ತಿರ ಸುಳಿಯುವುದಿಲ್ಲ. ಮನಸ್ಸು ದೇಹಗಳೆರಡನ್ನೂ ವ್ಯಾಕುಲತೆ- ಕಸಿವಿಸಿ ಆವರಿಸುತ್ತದೆ. ಇಂಥ ತೊಂದರೆಯಿದ್ದಾಗ, ಜೇನುತುಪ್ಪದಿಂದ ಈ ಕೆಳಗಿನ ಉಪಚಾರಗಳನ್ನು ಮಾಡಿ.
೧) ಪುದಿನದ 4-6 ಎಲೆ, 4 ಕರಿಮೆಣಸು, 2 ಲವಂಗ-ಇವುಗಳನ್ನು ಸೇರಿಸಿ ಚೂರ್ಣ ಮಾಡಿ. ಈ ಚೂರ್ಣದಲ್ಲಿ ಜೇನುತುಪ್ಪ ಸೇರಿಸಿ, ಬೆಳಗ್ಗೆ-ಸಾಯಂಕಾಲ ಸೇವಿಸಿ.
೨) ಪಟಕದ ಭಸ್ಮವನ್ನು ಒಂದು ಗುಂಜಿಯಷ್ಟು ತೆಗೆದುಕೊಂಡು, ಒಂದು ಚಮಚ ಜೇನುತುಪ್ಪದೊಡನೆ ಸೇವಿಸಿ.
೩) ಅರ್ಧ ಕಪ್ ಅನಾನಸ್ ಹಣ್ಣಿನ ರಸದಲ್ಲಿ ಎರಡು ಚಮಚ ಜೇನುತುಪ್ಪ ಸೇರಿಸಿ ಸೇವಿಸಿ.
೪) ಬೇವಿನ ಎಲೆಗಳನ್ನು ಅರ್ಧ ಲೋಟ ನೀರಿನಲ್ಲಿ ಕುದಿಸಿ ಸೋಸಿಕೊಳ್ಳಿ. ಇದು ತಣ್ಣಗಾದ ನಂತರ, ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಿ.. ಬೆವರು ಬಂದೂಡನೆ ಜ್ವರ ಇಳಿದುಹೋಗುವುದು.
೫) ಸೀತೋಪಲಾದಿ ಚೂರ್ಣ ದಲ್ಲಿ ಅರ್ಧ ಚಮಚ ಜೇನುತುಪ್ಪ ಸೇರಿಸಿ ಸೇವಿಸಿ.