ಕೂಗು ನಿಮ್ಮದು ಧ್ವನಿ ನಮ್ಮದು

ಬೀದಿ ಬೀದಿಯಲ್ಲಿ ಹೆಣ ಸುಡುವಂತಾಗಿದೆ, ಎಲ್ಲಿ ಬಂತು ಇವರ ಅಚ್ಛೇದಿನ್?: ಲಕ್ಷ್ಮಿ ಹೆಬ್ಬಾಳಕರ್ ಪ್ರಶ್ನೆ

ಬೆಳಗಾವಿ: ಕೊರೋನಾ ನಿಯಂತ್ರಣ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಸಂಪೂರ್ಣ ವಿಫಲವಾಗಿವೆ. ಇಡೀ ದೇಶದಲ್ಲಿ ಬೀದಿ ಬೀದಿಯಲ್ಲಿ ಹೆಣ ಸುಡುವಂತಾಗಿದೆ. ಎಲ್ಲಿ ಹೋಯಿತು ನಿಮ್ಮ ಅಚ್ಛೇ ದಿನ್? ನಮಗೆ ಅಚ್ಛೇ ದಿನ್ ಬೇಡ. 2013 ರಲ್ಲಿದ್ದಂತಹ ದಿನಗಳೇ ಇದ್ದರೆ ಸಾಕು ಎಂದು ರಾಷ್ಟ್ರದ ಜನರು ಕೈ ಮುಗಿದು ಬೇಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರರೂ ಆಗಿರುವ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿಯವರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಗೆ ಜನ ಕಾಯ್ತಾ ಇದ್ದಾರೆ. ಅದಿನ್ನೂ ಬಂದಿಲ್ಲ. ಈ ಸಂದರ್ಭದಲ್ಲಿ 2ನೇ ಅಲೆ ಬಂದಿದೆ, ಇನ್ನು 3ನೇ ಅಲೆ ಬರಲಿದೆ. ಆದರೆ ಹೆಣದಲ್ಲೂ ರಾಜಕಾರಣ ಮಾಡುವುದನ್ನು ಬಿಜೆಪಿಯಿಂದ ಕಲಿಯಬೇಕು ಎನ್ನುವಂತಾಗಿದೆ ಎಂದಿದ್ದಾರೆ.

ಕರ್ನಾಟಕದಲ್ಲಂತೂ ಯಾವುದಕ್ಕೂ ಲಂಗು, ಲಗಾಮು ಯಾವುದೂ ಇಲ್ಲ. ಕೊರೋನಾ ಕರ್ಫ್ಯೂ ನಗೆಪಾಟಲಿಗೀಡಾಗಿದೆ. ಆಕ್ಸಿಜನ್ ಇಲ್ಲದೆ ಜನ ಸಾಯುತ್ತಿದ್ದಾರೆ. ಸರಕಾರ ದಿವ್ಯ ನಿರ್ಲಕ್ಷ್ಯದಿಂದಿದೆ. ಯಾವ ಮಂತ್ರಿಗಳು ಏನು ಕೆಲಸ ಮಾಡುತ್ತಿದ್ದಾರೆ? ಯಾರಿಗೆ ಯಾವ ಜವಾಬ್ದಾರಿ ಇದೆ? ಎಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಹೆಣದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ನಾಚಿಕೆಯಾಗಬೇಕು ಇವರಿಗೆಲ್ಲ ಎಂದು ಹೆಬ್ಬಾಳಕರ್ ಕಿಡಿ ಕಾರಿದ್ದಾರೆ.

ಬೆಳಗಾವಿ ಜಿಲ್ಲೆಯ ಮಂತ್ರಿಗಳ ಇಲ್ಲೇ ಇದ್ದು ಕ್ರಮತೆಗೆದುಕೊಳ್ಳಬೇಕಿತ್ತು. ಬೆಳಗಾವಿ ಜಿಲ್ಲೆಗೆ ಬಾಗಲಕೋಟೆಯ ಗೋವಿಂದ ಕಾರಜೋಳ ಅವರನ್ನು ಉಸ್ತುವಾರಿ ಮಂತ್ರಿ ಮಾಡಲಾಗಿದೆ. ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಅವರಿಗೆ ಜಿಲ್ಲೆಯ ಬಗ್ಗೆ ಮಾಹಿತಿಯೇ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ನಾಲ್ವರು ಮಂತ್ರಿಗಳಿದ್ದರೂ ಯಾರೊಬ್ಬರೂ ಸಮರ್ಥರಿಲ್ಲ ಎಂದು ಬೇರೆ ಜಿಲ್ಲೆಯವರನ್ನು ಮಾಡಿದಂತಿದೆ. ಜಿಲ್ಲೆಯ ಪರಿಸ್ಥಿತಿ ಕೈ ಮೀರಿ ಹೋಗಿದೆ. ಕೆಎಲ್ಇ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಗಳನ್ನು 20ರಿಂದ 50ಕ್ಕೆ ಹೆಚ್ಚಿಸುತ್ತೇವೆ ಎಂದರೆ ಸರಕಾರ ಅನುಮತಿ ನೀಡುತ್ತಿಲ್ಲ. ಅದಕ್ಕೆ ಆಕ್ಸಿಜನ್ ಪೂರೈಸುತ್ತಿಲ್ಲ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.

ಕೇಂದ್ರ ಸರಕಾರ ಎಲ್ಲ ವಿಷಯಗಳಲ್ಲೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತ ಬಂದಿದೆ. ಜಿಎಸ್ಟಿ ವಿಷಯದಲ್ಲಿ ಅನ್ಯಾಯ, ಪ್ರವಾಹ ಸಂದರ್ಭದಲ್ಲಿ ಸತ್ತಿದ್ದಾರಾ, ಬದುಕಿದ್ದಾರಾ ನೋಡಲಿಲ್ಲ, ಈಗ ಕೊರೋನಾ ವಿಷಯದಲ್ಲಿ ಸಹ ಅನ್ಯಾಯವಾಗುತ್ತಿದೆ. ಆಕ್ಸಿಜನ್ ಪೂರೈಸುವಂತೆ ಹೈಕೋರ್ಟ್ ಹೇಳಿದರೆ ತಡೆಯಾಜ್ಞೆ ತರಲು ಸುಪ್ರಿಂ ಕೋರ್ಟ್ ಗೆ ಹೋಗುತ್ತಾರೆ. ಇದನ್ನೆಲ್ಲ ಸರಿಪಡಿಸುವವರ್ಯಾರು? 26 ಜನ ಸಂಸದರನ್ನು ಏನೆಂದು ಕರೆಯುವುದು? ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ನಿರ್ವಹಿಸಲು ಆಗಲಿಲ್ಲ ಎಂದರೆ ಈ ಎಲ್ಲ ಸಂಸದರೂ ಇದ್ದೂ ವ್ಯರ್ಥ. ಇವರೆಲ್ಲ ರಾಜಿನಾಮೆ ನೀಡಿ ಮನೆಗೆ ಹೋದರೂ ಏನೂ ನಷ್ಟವಾಗುವುದಿಲ್ಲ. ಇವರಿಗೆ ಗಟ್ಟಿ ತನವೇ ಇಲ್ವಾ ಎಂದು ಲಕ್ಷ್ಮಿ ಹೆಬ್ಬಾಳಕರ್ ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಗಾಂಧಿ ಕುಟುಂಬ, ಕಾಂಗ್ರೆಸ್ ನಾಯಕರನ್ನು ಹೀಯಾಳಿಸಿ ಮಾತನಾಡುತ್ತಿದ್ದರು. ಈಗ ಎಲ್ಲಿ ಅಡಗಿಕೊಂಡಿದ್ದಾರೆ? ಈಗ ಅವರ ಧ್ವನಿ ಎಲ್ಲಿ ಅಡಗಿ ಹೋಗಿದೆ. ಈ ಸಂದರ್ಭದಲ್ಲಿ ಧ್ವನಿ ಎತ್ತಿ ನೀವು ಜೀವಂತ ಇದ್ದೀರೆನ್ನುವುದನ್ನು ಕರ್ನಾಟಕದ ಜನರಿಗೆ ತೋರಿಸಿಕೊಡಿ ಎಂದು ಆಗ್ರಹಿಸಿದ್ದಾರೆ.

error: Content is protected !!