ಹುಬ್ಬಳ್ಳಿ: ಮಸೀದಿಯ ಚಿತ್ರದ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರ ಎಡಿಟ್ ಮಾಡಿ ಯುವಕನೊಬ್ಬ ಸ್ಟೇಟಸ್ ಹಾಕಿಕೊಂಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
“ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ, ಜೈ ಶ್ರೀರಾಮ್, ಹಿಂದೂ ಸಾಮ್ರಾಟ್” ಎಂದು ಚಿತ್ರದ ಮೇಲೆ ಬರೆದು. ಹಿಂದು ಧ್ವಜವನ್ನು ಮುಸ್ಲಿಂ ಪ್ರಾರ್ಥನಾ ಮಂದಿರದ ಮೇಲೆ ಹಾರಾಟವಾಗುತ್ತಿರುವ ರೀತಿಯಲ್ಲಿ ಎಡಿಟ್ ಮಾಡಿದ ವಿಡಿಯೋವೊಂದು ವೈರಲ್ ಆದ ವಿವಾದಕ್ಕೆ ಹುಬ್ಬಳ್ಳಿ ಉದ್ವಗ್ನವಾಗಿದೆ. ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಅಭಿಷೇಕ್ ಹಿರೇಮಠ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಸಮೀಪದಲ್ಲಿನ ಹಿಂದು ದೇವಾಲಯ, ಪೊಲೀಸ್ ಜೀಪ್, ಬಸ್ ಗಳ ಮೇಲೆ ಕಲ್ಲುತೂರಾಟ ನಡೆದಿದೆ.
ಹೀಗಾಗಿ ಹುಬ್ಬಳ್ಳಿ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ವಿಷಯ ತಿಳಿಯುತ್ತಲೇ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಮುಸ್ಲಿಂ ಸಮುದಾಯದವರು, ಗಲಾಟೆ ಮಾಡಲು ಮುಂದಾದರು. ಏಕಾಏಕಿ ರೊಚ್ಚಿಗೆದ್ದು ಗಲಾಟೆ ಮಾಡಲು ಆರಂಭಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಮೇಲೂ ದಾಳಿಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.
ಪೊಲೀಸರು ಗಲಾಟೆ ತಡೆಯಲು ಅಶ್ರುವಾಯು ಪ್ರಯೋಗಿಸಿದರು. ಘಟನೆಯಲ್ಲಿ ಪೊಲೀಸ್ ವಾಹನಗಳು ಜಖಂಗೊಂಡಿವೆ. ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣ ಕ್ರಮವಾಗಿ ನಿಷೇಧಾಜ್ಞೆ ವಿಧಿಸಲಾಗಿದೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ ಆಕ್ರೋಶಗೊಂಡ ಮುಸ್ಲಿಮರು ಕಲ್ಲು ತೂರಾಟ ಮಾಡಿದರು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಉದ್ವಿಗ್ನ ಗುಂಪಿನವರು ಪೊಲೀಸ್ ವಾಹನಗಳ ಮೇಲೆ ಕಲ್ಲು ಎಸೆದಿದ್ದಾರೆ. ಕಾನ್ಸ್ಟೆಬಲ್ ಗುರುಪಾದಪ್ಪ ಸ್ವಾದಿ, ಪೂರ್ವ ಸಂಚಾರ ಇನ್ಸ್ಪೆಕ್ಟರ್ ಕಾಡದೇವರಮಠ ಗಾಯಗೊಂಡಿದ್ದಾರೆ. ಸಾರ್ವಜನಿಕರಿಗೂ ಗಾಯಗಳಾಗಿವೆ.
ಪೊಲೀಸ್ ಕಮಿಷನರ್ ಲಾಭೂರಾಮ್ ಅವರು ಮುಸ್ಲಿಂ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದರು. ಘಟನೆ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಘಟನೆ ನಡೆದ ಸುತ್ತಲಿನ ಪ್ರದೇಶದಲ್ಲಿದ್ದ ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಲಾಭೂರಾಮ್ ತಡರಾತ್ರಿವರೆಗೆ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಪ್ರಮುಖ ಧಾರ್ಮಿಕ ಸ್ಥಳಗಳ ಎದುರು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಾನುವಾರ ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಕರೆಸಿಕೊಳ್ಳಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಮುಂಜಾಗ್ರತಾ ಕ್ರಮವಾಗಿ ಭದ್ರಾವತಿಯ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರೆಸಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಭಾನುವಾರ ರಜೆ ಮೇಲೆ ಹೋದ ಸಿಬ್ಬಂದಿಗೂ ಕರ್ತವ್ಯಕ್ಕೆ ಮರಳಲು ಸೂಚಿಸಿದ್ದಾರೆ.