ಚಾಮರಾಜನಗರ: ಕೋವಿಡ್ ನಿಂದ ಮೃತಪಟ್ಟ ಆತ್ಮೀಯ ಗೆಳೆಯನ ಕುಟುಂಬಕ್ಕೆ ಆಧಾರವಾಗಬೇಕೆಂದು ನಿರ್ಧರಿಸಿ ಯುವಕನೋರ್ವ, ಗೆಳೆಯನ ಪತ್ನಿಯನ್ನು ಪುನರ್ ವಿವಾಹವಾದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಚೇತನ್ ಕುಮಾರ್ (41) ಹಾಗೂ ಹನೂರು ಪಟ್ಟಣದ ಅಂಬಿಕಾ (30) 8 ವರ್ಷದ ಹಿಂದೆ ವಿವಾಹವಾಗಿದ್ದರು. ಚೇತನ್ ಕುಮಾರ್ ಅವರು ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿ ಬೆಂಗಳೂರಿನಲ್ಲೇ ನೆಲೆಸಿದ್ದರು. ಈ ದಂಪತಿಗೆ 7 ವರ್ಷದ ಪುತ್ರ ಇದ್ದಾನೆ. ಅನೇಕ ಕುಟುಂಬಗಳನ್ನು ತಲ್ಲಣಗೊಳಿಸಿದ ಕೋವಿಡ್ ಸೋಂಕು ಈ ಕುಟುಂಬವನ್ನೂ ಇನ್ನಿಲ್ಲದಂತೆ ಕಂಗೆಡಿಸಿತು. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಚೇತನ್ ಕುಮಾರ್ ಕೋವಿಡ್ ಸೋಂಕು ತಗುಲಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಚಿಕಿತ್ಸೆ ಪಡೆದರೂ, ಫಲಕಾರಿಯಾಗದೇ ಮೃತಪಟ್ಟರು.
ತನ್ನ ಪತಿಯ ಸಾವಿನಿಂದ ಅಂಬಿಕಾ ಕಂಗೆಟ್ಟರು. ಶೂನ್ಯ ಭಾವ ಆವರಿಸಿತು. ಡಿಪ್ರೆಷನ್‌ಗೊಳಗಾಗಿ ಆತ್ಮಹತ್ಯೆಯ ಯೋಚನೆ ಮಾಡಿದರು. ಈ ಸಂದರ್ಭದಲ್ಲಿ ಆ ಕುಟುಂಬದತ್ತ ಸಹಾಯ ಹಸ್ತ ಚಾಚಿದವರು ಚೇತನ್ ಕುಮಾರ್ ಗೆಳೆಯರು. ಅಂಬಿಕಾ ಅವರ ಬಳಿ ತೆರಳಿ, ಸಾಂತ್ವನ ಸಮಾಧಾನ ಹೇಳಿದರು. ಚೇತನ್ ಕುಮಾರ್ ಅವರ ಆತ್ಮೀಯ ಗೆಳೆಯ ಚಾಮರಾಜನಗರ ತಾಲೂಕಿನ ನಂಜೇದೇವನಪುರ ಗ್ರಾಮದ 36 ವರ್ಷದ ಎಂ.ಲೋಕೇಶ್ ತನ್ನ ಗೆಳೆಯನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಲು ನಿರ್ಧರಿಸಿದರು.
ಪತಿಯ ಸಾವಿನ ನೋವಿನಿಂದ ಹೊರಬಾರದ ಅಂಬಿಕಾ, ಆರಂಭದಲ್ಲಿ ಇದಕ್ಕೆ ಸಮ್ಮತಿಸಲಿಲ್ಲ. ಹಲವು ತಿಂಗಳ ಬಳಿಕ ತಂದೆ ತಾಯಿ, ಅತ್ತೆ ಮಾವ ಅವರ ಮನವೊಲಿಕೆಯ ಬಳಿಕ ಅಂಬಿಕಾ ಈ ಮದುವೆಗೆ ಒಪ್ಪಿದರು. ಕಳೆದ ತಿಂಗಳು ಜನವರಿ 27 ರಂದು ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸರ್ಪಭೂಷಣ ಶಿವಯೋಗಿಗಳ ಮಠದ ಆವರಣದಲ್ಲಿ ಈ ಆದರ್ಶ ಮದುವೆ ನಡೆಯಿತು. ಲೋಕೇಶ್ ಅವರು ಅಂಬಿಕಾ ಪುನರ್ ವಿವಾಹವಾಗುವ ಮೂಲಕ ಮಾದರಿಯಾದರು. ಅಂಬಿಕಾ ಅವರ 7 ವರ್ಷದ ಪುತ್ರ ಸಹ ತಾಯಿಯ ಮದುವೆಗೆ ಸಾಕ್ಷಿಯಾಗಿದ್ದ.
ಸರ್ಪಭೂಷಣ ಶಿವಯೋಗಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಹಂಸಭಾವಿಯ ಸಿದ್ಧಲಿಂಗಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಶಿಕಾರಿಪುರದ ಬಸವಲಿಂಗಸ್ವಾಮೀಜಿ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷ ಪರಮಶಿವಯ್ಯ ಈ ಮಾದರಿ ಮದುವೆಯ ಸಮ್ಮುಖ ವಹಿಸಿದ್ದರು.