ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾಗೆ ಮತ್ತೆ ಹತ್ತು ಜನ ಶಿಕ್ಷಕರು ಬಲಿಯಾಗಿದ್ದಾರೆ. ಕೋವಿಡ್ ನಲ್ಲೂ ಕರ್ತವ್ಯ ಮಾಡುತ್ತಿರುವ ಮತ್ತು ಚುನಾವಣೆಯ ನಂತರ ಸೋಂಕು ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಶಿಕ್ಷಕರು ಚಿಕಿತ್ಸೆ ಫಲಿಸದೇ ರಾಜ್ಯದ ಹಲವೆಡೆ ಇಂದೂ ಕೂಡಾ ಸಾವನಪ್ಪಿದ್ದಾರೆ. ಬಾಗಲಕೋಟ ಜಿಲ್ಲೆಯ ಬದಾಮಿ ತಾಲ್ಲೂಕಿನಲ್ಲಿ ವಿನಾಯಕ ಕೇಶಪ್ಪ ಭಾವಿಕಟ್ಟಿ ವಿಜ್ಞಾನ ಶಿಕ್ಷಕರು ಮುರಾರ್ಜಿ ವಸತಿ ಶಾಲೆ ಚಿಕ್ಕಮುಚ್ಚಳಗುಡ್ಡ ಇವರು ಕೋವಿಡ್ ನಿಂದಾಗಿ ಮೃತರಾಗಿದ್ದಾರೆ. ಇವರ ಸಹೋದರ ಎಸ್.ಕೆ.ಭಾವಿಕಟ್ಟಿ ಶಿಕ್ಷಕರು ಹಾಗೂ ಮೃತರ ಪತ್ನಿ ಶ್ರೀಮತಿ ಅಂಬಿಕಾ ಭಾವಿಕಟ್ಟಿ ಕೂಡ ಶಿಕ್ಷಕಿ ಆಗಿದ್ದಾರೆ. ಮೃತರಿಗೆ ಬದಾಮಿ ತಾಲ್ಲೂಕಿನ ಸಮಸ್ತ ಶಿಕ್ಷಕ ಬಳದವರು ಸಂತಾಪವನ್ನು ಸೂಚಿಸಿದ್ದಾರೆ. ವಿಠ್ಠಲ ಮುಗದಿ ವಿಜಯಪುರ ಜಿಲ್ಲೆಯ ಚಡಚಣದ ಶಿಗನಾಪೂರ ಎಮ್.ವಿ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಶಿಕ್ಷಕರಾಗಿರುವ ಇವರಿಗೆ ಸೋಂಕು ಕಾಣಿಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇವರು ಇಂದು ಮೃತಪಟ್ಟಿದ್ದಾರೆ.
ಇನ್ನು ಮಂಜುನಾಥ್ ಕನಕಪುರ ತಾಲ್ಲೂಕಿನ ಶಿವನಹಳ್ಳಿ ಗ್ರಾಮದ ಹನುಮಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಕೋವಿಡ್ ಗೆ ಇವರು ಬಲಿಯಾಗಿದ್ದಾರೆ. ಇವರಿಗೆ ಪತ್ನಿ ಹಾಗೂ ಚಿಕ್ಕ ಮಗು ಇದೆ. ಇವರು ತುಮಕೂರಿನ ಸಿದ್ದಾರ್ಥ್ ಆಸ್ಪತ್ರೆಯಲ್ಲಿ ಚಿಕತ್ಸೆಯನ್ನು ಪಡೆಯುತ್ತಿದ್ದರು. ಆನಂದ್ ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪೇನಹಳ್ಳಿ ಶಾಲೆಯ ಸಹ ಶಿಕ್ಷಕರಾದ ಇವರು ಕೂಡಾ ಕೋವಿಡ್ ಗೆ ಬಲಿಯಾಗಿದ್ದಾರೆ. ಸೋಂಕು ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇವರು ಆಸ್ಪತ್ರೆಯಲ್ಲಿ ಮೃತರಾಗದ್ದಾರೆ. ಆನಂದ್ ರವರ ಅಕಾಲಿಕ ಮರಣದಿಂದಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ತಿಪ್ಪೇನಹಳ್ಳಿ ಶಾಲೆಯ ಮಕ್ಕಳು ಶಿಕ್ಷಕರು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಶಿವರಾಜು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಡಣಾಯಕನಪುರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಇವರು ಕೂಡಾ ಕೋವಿಡ್ ಗೆ ಬಲಿಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಇವರ ನಿಧನಕ್ಕೆ ಟಿ.ನರಸೀರಪುರ ತಾಲ್ಲೂಕಿನ ಸಮಸ್ತ ಶಿಕ್ಷಕರು ಸಂತಾಪ ಸೂಚಿಸಿದ್ದಾರೆ.
ಚಿಂತಾಮಣಿಯ ಕಾಲೇಜು ಉಪನ್ಯಾಸಕ ಡಾ.ರಘು ಅವರು ಕೂಡಾ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ. ಚಿಕ್ಕ ವಯಸ್ಸಿನ ಇವರು ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಇನ್ನೂ ಇವರ ನಿಧನಕ್ಕೆ ಚಿಂತಾಮಣಿಯ ಸಮಸ್ತ ಉಪನ್ಯಾಸಕರು ಮತ್ತು ಶಿಕ್ಷಕರು ಭಾವಪೂರ್ಣ ಶೃದ್ಧಾಂಜಲಿಯನ್ನು ಸಲ್ಲಿಸಿದ್ದಾರೆ. ಶಿವಾನಂದ ರಾಯಚೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರು. ಇವರು ಕೂಡಾ ಮಹಾಮಾರಿಗೆ ಬಲಿಯಾಗಿದ್ದಾರೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೇಡರ ಕಾರ್ಲಕುಂಟಿ ಇವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು ನಂತರ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ನಿಧನಕ್ಕೆ ಶಾಲೆಯ ಸಮಸ್ತ ಶಿಕ್ಷಕ ಬಳಗದವರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಪಂಚಾಕ್ಷರಯ್ಯ ರಾಯಚೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಸ್ಕಿ ತಾಲ್ಲೂಕಿನ ತಾಂಡಾ ಶಾಲೆಯ ಶಿಕ್ಷಕರಾಗಿರುವ ಇವರು ಕೂಡಾ ಸೋಂಕು ಕಾಣಸಿಕೊಂಡು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಇವರು ನಿಧನರಾಗಿದ್ದಾರೆ. ಇನ್ನೂ ಮೃತರಾದ ಇವರಿಗೆ ಶಾಲೆಯ ಮತ್ತು ಮಸ್ಕಿ ತಾಲ್ಲೂಕಿನ ಸಮಸ್ತ ಶಿಕ್ಷಕ ಬಳದವರು ಸಂತಾಪವನ್ನು ಸೂಚಿಸಿದ್ದಾರೆ.