ಕೂಗು ನಿಮ್ಮದು ಧ್ವನಿ ನಮ್ಮದು

ವಿಜಯ್ ವರ್ಮಾ ಜೊತೆಗಿನ ಪ್ರೇಮ ಸಂಬಂಧ ಒಪ್ಪಿಕೊಂಡ ನಟಿ ತಮನ್ನಾ: ಲವ್ ಶುರುವಾಗಿದ್ದು ಯಾವಾಗ?

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಈಗ ಬಹುಭಾಷಾ ನಟಿ. ತೆಲುಗು, ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ತಮನ್ನಾ ಇತ್ತೀಚೆಗೆ ಬಾಲಿವುಡ್ನಲ್ಲಿಯೂ ಸಾಲು-ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಆಗೊಮ್ಮೆ ಈಗೊಮ್ಮೆ ತಮನ್ನಾ ಹೆಸರು ಕೆಲವು ದಕ್ಷಿಣದ ನಟರೊಟ್ಟಿಗೆ ಕೇಳಿ ಬರುತ್ತಿತ್ತು. ಆದರೆ ಇತ್ತೀಚೆಗೆ ಬಾಲಿವುಡ್ ನಟನೊಬ್ಬನೊಟ್ಟಿಗೆ ತಮನ್ನಾ ಹೆಸರು ಗಾಢವಾಗಿ ಕೇಳಿ ಬಂದಿದ್ದು ಇದೀಗ ಸ್ವತಃ ತಮನ್ನಾ ತಮ್ಮ ಪ್ರೇಮ ಸಂಬಂಧದ ವಿಷಯ ಬಹಿರಂಗಗೊಳಿಸಿದ್ದಾರೆ

ಬಾಲಿವುಡ್ನ ಪ್ರತಿಭಾವಂತ ಪೋಷಕ ನಟ ವಿಜಯ್ ವರ್ಮಾ ಜೊತೆ ತಮನ್ನಾ ಹೆಸರು ಕೇಳಿ ಬಂದಿತ್ತು. ಇಬ್ಬರೂ ಕೆಲವು ಕಡೆ ಒಟ್ಟಿಗೆ ಕಾಣಿಸಿಕೊಂಡು ಆ ಸುದ್ದಿಗಳಿಗೆ ಇನ್ನಷ್ಟು ಪುಷ್ಠಿ ನೀಡಿದ್ದರು. ಇದೀಗ ಸ್ವತಃ ನಟಿ ತಮನ್ನಾ ತಮ್ಮ ಹಾಗೂ ವಿಜಯ್ ವರ್ಮಾ ನಡುವಿನ ಪ್ರೇಮವನ್ನು ಒಪ್ಪಿಕೊಂಡಿದ್ದಾರೆ. ಫಿಲಂಕಂಪ್ಯಾನಿಯನ್ ಜೊತೆ ಮಾತನಾಡಿರುವ ನಟಿ ತಮನ್ನಾ ತಾವು ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದು, ”ಯಾರೋ ಒಬ್ಬರು ನಿಮ್ಮ ಸಹನಟರಾಗಿದ್ದ ಮಾತ್ರಕ್ಕೆ ಅವರೊಡನೆ ಆಕರ್ಷಿತರಾಗಲು ಸಾಧ್ಯವಿಲ್ಲ. ಏಕೆಂದರೆ ನಾನು ಈಗಾಗಲೇ ಹಲವಾರು ನಟರೊಡನೆ ನಟಿಸಿದ್ದೇನೆ. ಯಾರ ಕಡೆಗೂ ನಾನು ಆಕರ್ಷಿತಳಾಗಿಲ್ಲ. ಯಾರ ಬಗ್ಗೆಯಾದರೂ ನೀವು ನಿಜಕ್ಕೂ ಮನಸೋತಿರೆಂದರೆ, ಭಾವನೆಗಳು ಹುಟ್ಟಿದವೆಂದರೆ ಅದು ಬಹಳ ಖಾಸಗಿ ವಿಷಯವಾಗಿರುತ್ತದೆ. ಆ ವ್ಯಕ್ತಿ ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ, ಯಶಸ್ವಿ ವ್ಯಕ್ತಿಯೋ ಎಂಬುದೆಲ್ಲವೂ ಗಣನೆಗೆ ಬರುವುದೇ ಇಲ್ಲ” ಎಂದಿದ್ದಾರೆ.

ಮುಂದುವರೆದು ಮಾತನಾಡಿ, ”ವಿಜಯ್ ವರ್ಮಾ ನನ್ನ ಖುಷಿಯ ಖಜಾನೆ” ಎಂದು ಬಣ್ಣಿಸಿದ್ದು, ನಮ್ಮ ಸಂಬಂಧ ಬಹಳ ನೈಸರ್ಗಿಕ ರೀತಿಯಲ್ಲಿ ಯಾವುದೇ ಒತ್ತಡಗಳಿಲ್ಲದೆ ಶುರುವಾಯ್ತು ಎಂದು ಹೇಳಿಕೊಂಡಿದ್ದಾರೆ. ಮತ್ತು ಇಬ್ಬರೂ ಒಟ್ಟಿಗೆ ನಟಿಸಿರುವ ಲಸ್ಟ್ ಸ್ಟೊರೀಸ್ 2 ಸಿನಿಮಾದ ಸೆಟ್ನಲ್ಲಿಯೇ ನಮ್ಮ ಪ್ರೀತಿ ಶುರುವಾಯಿತು ಎಂದು ಸಹ ತಮನ್ನಾ ಹೇಳಿಕೊಂಡಿದ್ದಾರೆ. ಆದರೆ ಕೆಲವು ದಿನಗಳ ಮುಂದಿನ ಸಂದರ್ಶನವೊಂದರಲ್ಲಿ ತಮ್ಮ ಹಾಗೂ ವಿಜಯ್ ಬಗೆಗಿನ ಸುದ್ದಿಗಳ ಬಗ್ಗೆ ಮಾತನಾಡಿ, ಅವೆಲ್ಲ ಗಾಳಿಸುದ್ದಿ ಆ ಬಗ್ಗೆ ನಾನು ಸ್ಪಷ್ಟನೆ ನೀಡಬೇಕಿಲ್ಲ ಎಂದಿದ್ದರು. ಆದರೆ ಈಗ ತಮ್ಮ ಹಾಗೂ ವಿಜಯ್ ನಡುವಿನ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.

ವಿಜಯ್ ವರ್ಮಾ ಬಾಲಿವುಡ್ನ ಪ್ರತಿಭಾವಂತ ಪೋಷಕ ನಟ. ತೀರ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದು ಈಗ ಪ್ರಧಾನ ಪೋಷಕ ಪಾತ್ರ ಅಥವಾ ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ವಿಜಯ್ ವರ್ಮಾ. 2012 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ವಿಜಯ್ ವರ್ಮಾಗೆ ಮೊದಲಿಗೆ ತುಸು ಹೆಸರು ಮಾಡಿಕೊಟ್ಟಿದ್ದು ಪಿಂಕ್ ಸಿನಿಮಾದ ಸಣ್ಣ ನೆಗೆಟಿವ್ ಪಾತ್ರ. ಅದಾದ ಬಳಿಕ 2019ರ ಗಲ್ಲಿ ಬಾಯ್ ಸಿನಿಮಾದ ಪೋಷಕ ಪಾತ್ರದಿಂದ ಒಳ್ಳೆಯ ಹೆಸರಾಯ್ತು. ಈ ನಡುವೆ ತೆಲುಗಿನ ಎಂಸಿಎ ಹೆಸರಿನ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿಯೂ ವಿಜಯ್ ನಟಿಸಿದರು.

ಮಿರ್ಜಾಪುರ್ ಸಿನಿಮಾದ ಅವಳಿ-ಜವಳಿ ಪಾತ್ರ ವಿಜಯ್ ವರ್ಮಾಗೆ ಉತ್ತಮ ಪ್ರತಿಕ್ರಿಯೆ ಗಳಿಸಿಕೊಟ್ಟಿತು. ಇತ್ತೀಚೆಗೆ ಬಿಡುಗಡೆ ಆದ ವೆಬ್ ಸರಣಿ ದಹಾಡ್ನಲ್ಲಿ ವಿಲನ್ ಪಾತ್ರದಲ್ಲ ವಿಜಯ್ ವರ್ಮಾ ಮಿಂಚಿದ್ದಾರೆ. ನಟಿ ಆಲಿಯಾ ಭಟ್ ಜೊತೆ ಡಾರ್ಲಿಂಗ್ಸ್ ಹೆಸರಿನ ಸಿನಿಮಾದಲ್ಲಿಯೂ ವಿಜಯ್ ನಟಿಸಿದ್ದಾರೆ. ಇದೀಗ ಲಸ್ಟ್ ಸ್ಟೋರೀಸ್ 2 ಹೆಸರಿನ ಅಂಥೋಲಜಿ ಸಿನಿಮಾದಲ್ಲಿ ತಮನ್ನಾ ಹಾಗೂ ವಿಜಯ್ ವರ್ಮಾ ಒಟ್ಟಿಗೆ ನಟಿಸಿದ್ದಾರೆ.

error: Content is protected !!