ಬೆಳಗಾವಿ: ಡಿಸೆಂಬರ್ 10 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಶನಿವಾರ ಸವದತ್ತಿ ತಾಲೂಕಿನ ವಿವಿಧ ಭಾಗಗಳಿಗೆ ತೆರಳಿ ಮತಯಾಚನೆ ಮಾಡಿದರು.
ಯರಜರ್ವಿ, ಸತ್ತಿಗೇರಿ ಹಾಗೂ ಸಿಂದೋಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿಯಾಗಿ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡಿ ಪ್ರಚಂಡ ಬಹುಮತಗಳಿಂದ ಆರಿಸಿ ತಂದು ವಿಧಾನ ಪರಿಷತ್ತಿನಲ್ಲಿ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಡಬೇಕೆಂದು ಅವರು ವಿನಂತಿಸಿದರು.
ಕಾಂಗ್ರೆಸ್ ಪಕ್ಷ ಕೇವಲ ಭರವಸೆ ನೀಡುವ ಪಕ್ಷವಲ್ಲ, ಜನಪರ, ರೈತಪರ, ಶ್ರಮಿಕರ, ಬಡವರ ಪರ ಪಕ್ಷವಾಗಿದ್ದು, ತನ್ನ ಅಧಿಕಾರದ ಅವಧಿಯಲ್ಲಿ ಸಾವಿರಾರು ಅಭಿವೃದ್ಧಿಯ ಕೆಲಸಗಳನ್ನು ಕೈಗೊಂಡು ಯಾವ ಪಕ್ಷವೂ ಮಾಡಲಾರದಂತ ಸಾಧನೆಗಳನ್ನು ಮಾಡಿದೆ. ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸವಾಗಿದೆ. ಪಂಚಾಯಿತಿ ರಾಜ್ ವ್ಯವಸ್ಥೆ ಜಾರಿಗೆ ತಂದಿದ್ದು ಮತ್ತು ಅದನ್ನು ಸಬಲಗೊಳಿಸಿದ್ದು ಕಾಂಗ್ರೆಸ್ ಪಕ್ಷ. ಇಂತಹ ಅಗಾಧ ಇತಿಹಾಸವಿರುವ ಪಕ್ಷದಿಂದ ಸ್ಪರ್ಧಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಸುಧೈವವಾಗಿದ್ದು, ಎಲ್ಲರೂ ಬೆಂಬಲಿಸುವ ಮೂಲಕ ನನಗೆ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಡಬೇಕು ಎಂದು ಚನ್ನರಾಜ ಕೋರಿದರು.
ವಿಕೇಂದ್ರೀಕರಣ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಹಲವಾರು ಕನಸುಗಳನ್ನು ಹೊತ್ತಿದ್ದೇನೆ. ಗ್ರಾಮಗಳ ವಿಕಾಸವಾದಾಗಲೇ ದೇಶದ ವಿಕಾಸ ಸಾಧ್ಯ ಎನ್ನುವುದನ್ನು ಅರಿತಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರಿಗೂ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಅನುದಾನ ಕೊಡಿಸಲು ಪ್ರಯತ್ನಿಸಬೇಕೆಂದಿದ್ದೇನೆ. ಈ ಎಲ್ಲ ಕಾರ್ಯಗಳಿಗೆ ಎಲ್ಲರೂ ನನಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ವಿಶ್ವಾಸ ವೈದ್ಯ, ಆರ್ ವಿ ಪಾಟೀಲ, ಬಿ ಎನ್ ಪ್ರಭುನವರ, ಮಹರಾಜಗೌಡ ಪಾಟೀಲ, ಮಲ್ಲಿಕಾರ್ಜುನ ಕಿರಗುಡಿ, ಸುರೇಶ ಬಡಗಿಗೌಡರ, ಮಹಾಂತೇಶ ಮತ್ತಿಕೊಪ್ಪ, ಚಂದ್ರಣ್ಣ, ಪಂಚನಗೌಡ ದ್ಯಾಮನಗೌಡರ, ಬಸವರಾಜ ಗುರುವಣ್ಣವರ, ಶ್ರೀಶೈಲ ಮುತಗುಂಡ, ಡಿ ಡಿ ಟೋಪೋಜಿ, ಮಲ್ಲು ಜಕಾತಿ, ಪ್ರವೀಣ ರಾಮಪ್ಪನವರ, ಆಸಿಫ್ ಯಡ್ರಾವಿ, ಯಶವಂತ ಯಲಿಗಾರ, ಗ್ರಾಮ ಪಂಚಾಯತ್ ಗಳ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.