ಕೊಪ್ಪಳ: ಚಿತ್ರ ಸಾಹಿತಿ ಕೆ.ಕಲ್ಯಾಣ ಕೌಟುಂಬಿಕ ಕಲಹಕ್ಕೆ ಕಾರಣವಾಗಿದ್ದ ಜ್ಯೋತಿ ಅಲಿಯಾಸ್ ಗಂಗಾ ಕುಲಕರ್ಣಿ ದುರಂತ ಅಂತ್ಯ ಕಂಡಿದ್ದಾಳೆ. ತೆರೆದ ಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆಯೇ ಜ್ಯೋತಿ ಕುಸಿದು ಬಿದ್ದಿದ್ದಾಳೆ. ನ್ಯಾಯಾಧೀಶರಿಗೆ ಬರೆದ ಡೆತ್ ನೋಟ್ ಹಿಡಿದುಕೊಂಡು ಕೋರ್ಟ್ ಹಾಲ್ ಗೆ ಬಂದಿರೋ ಜ್ಯೋತಿ ಕುಲಕರ್ಣಿ ಅಲ್ಲೇ ಕುಸಿದು ಬಿದ್ದಿದ್ದಾಳೆ.
ಶವಗಾರದಲ್ಲಿ ಹೆಣವಾಗಿ ಮಲಗಿರುವ ಜ್ಯೋತಿ ಅಲಿಯಾಸ್ ಗಂಗಾ ಕುಲಕರ್ಣಿ. ಹೀಗೆ ಹೇಳಿದ್ರೆ ಯಾರಿಗೂ ಅರ್ಥ ಆಗೋದಿಲ್ಲ ಅನ್ನಿಸುತ್ತೆ. ಚಿತ್ರಸಾಹಿತಿ ಕೆ.ಕಲ್ಯಾಣ ಕುಟುಂಬದಲ್ಲಿ ಕಲಹ ಸೃಷ್ಠಿಸಿದ್ದ ಅವರ ಮನೆಯ ಅಡಿಗೆ ಕೆಲಸದಾಕೆ. ಹೌದು, ಸಾಹಿತಿ ಕೆ.ಕಲ್ಯಾಣ ಕೌಟುಂಬಿಕ ಕಲಹದ ರುವಾರಿ ಹಾಗೂ ವಂಚಿಸಿ ಅವರ ಆಸ್ತಿ ಲಪಟಾಯಿಸಿದ್ದ ಜ್ಯೋತಿ ಇಂದು ತೆರದ ನ್ಯಾಯಾಲಯದಲ್ಲಿ ಕೊನೆ ಉಸಿರು ಬಿಟ್ಟಿದ್ದಾರೆ. ವಿಷ ಸೇವಿಸಿ ಕುಷ್ಟಗಿ ನ್ಯಾಯಾಲಯಕ್ಕೆ ನುಗ್ಗಿರುವ ಈಕೆ ನ್ಯಾಯಧೀಶರ ಕಡೆಗೆ ತನ್ನ ಕೈಯಲ್ಲಿದ್ದ ಆಧಾರ ಕಾರ್ಡ್ ಮತ್ತು ಡೆತ್ ನೋಟ್ ಎಸೆದು ಕುಸಿದು ಬಿದ್ದಿದ್ದಾಳೆ. ನ್ಯಾಯಾಧೀಶರ ಸೂಚನೆಯಂತೆ ಕೂಡಲೇ ವಕೀಲರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಬಾಗಲಕೋಟೆ ಜಿಲ್ಲೆ ಮೂಲದ ಜ್ಯೋತಿ ಅಲಿಯಾಸ್ ಗಂಗಾ ಕುಲಕರ್ಣಿ ಇತ್ತೀಚೆಗೆ ಕೆ.ಕಲ್ಯಾಣ ಮನೆಯಲ್ಲಿ ಕೆಲಸಕ್ಕೆ ಸೇರಿ ಅಲ್ಲೇ ಆಧಾರ ಕಾರ್ಡ್ ಮಾಡಿಸಿ ಕೊಂಡಿದ್ದಾರೆ. ಆದ್ರೆ, ಈಕೆಗೆ ಕಳೆದ 2017 ರಿಂದ ಕೊಪ್ಪಳಕ್ಕೆ ನಂಟಿದೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 20 ಯುವಕರಿಂದ ತಲಾ 3 ಲಕ್ಷ ಹಣ ಪಡೆದು ವಂಚಿಸಿದ್ದಳು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಆಗಿನ ಕುಷ್ಟಗಿ ಪಿಎಸ್ಐ ವಿಶ್ವನಾಥ ಹಿರೇಗೌಡ ಅವರು ತನಿಖೆ ಮಾಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಜ್ಯೋತಿ@ಗಂಗಾ ಕುಲಕರ್ಣಿ ಕುಷ್ಟಗಿ ಕೋರ್ಟ್ ಗೆ ಹಾಜರಾಗುತ್ತಿದ್ದಳು. ಕಳೆದ ಕೆಲ ತಿಂಗಳಿಂದ ಕೋರ್ಟ್ ಗೆ ಹಾಜರಾಗದ ಹಿನ್ನೆಲೆ, ಕುಷ್ಟಗಿ ಕೋರ್ಟ್ ವಾರೆಂಟ್ ಹೊರಡಿಸಿ, ಬಂಧಿಸಿ ಕರೆ ತರುವಂತೆ ಆದೇಶಿಸಿತ್ತು. ನವೆಂಬರ್ 3 ರಂದು ಕೋರ್ಟ್ ಗೆ ಹಾಜರಾಗುವಂತೆ ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ತನ್ನ ಪರ ವಕೀಲರಿಗೆ ಭೇಟಿಯಾಗಲು ಜ್ಯೋತಿ ಇಂದು ಕುಷ್ಟಗಿಗೆ ಬಂದಿರಬಹುದು ಎನ್ನಲಾಗಿದೆ.
ಮೃತ ಜ್ಯೋತಿ ಕುಲಕರ್ಣಿ ಕೈಯಲ್ಲಿ ಡೆತ್ ನೋಟ್ ಹಿಡಿದುಕೊಂಡು ಬಂದಿದ್ದು, ಕುಷ್ಟಗಿ ನ್ಯಾಯಾಧೀಶರಿಗೇ ಅಡ್ರೆಸ್ ಮಾಡಿದ್ದಾಳೆ. ಅಲ್ಲಿನ ಕೆಲ ವಕೀಲರು ತಾಂತ್ರಿಕ ಸಹಾಯದಿಂದ ಅನುವಾದ ಮಾಡಿ ನೋಡಿದ್ದು, ನಾನು ಮಾಡಿದ ಕರ್ಮಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದೆ ಎನ್ನಲಾಗಿದೆ.