ಕೂಗು ನಿಮ್ಮದು ಧ್ವನಿ ನಮ್ಮದು

ಮಹಿಳೆಯ ಹೊಟ್ಟೆಯಿಂದ ನಾಲ್ಕು ಅಡಿ ಉದ್ದದ ಹಾವು ಎಳೆದು ತೆಗೆದ ವೈದ್ಯರು

ಜಗತ್ತಿನಲ್ಲಿ ಎಂಥ ಚಿತ್ರವಿಚಿತ್ರ ಘಟನೆಗಳು ನಡೆಯುತ್ತವೆ. ಕೆಲ ದಿನಗಳ ಹಿಂದಷ್ಟೇ ಮಹಿಳೆಯೊಬ್ಬಳ ಕಿವಿಯಲ್ಲಿ ಆಶ್ರಯ ಪಡೆದಿದ್ದ ಹಾವೊಂದನ್ನು ವೈದ್ಯರು ಹೊರತೆಗೆದಿದ್ದರು. ಈ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಅದೇ ರೀತಿ ಈಗ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಮಹಿಳೆಯೊಬ್ಬಳ ಅನ್ನನಾಳದಲ್ಲಿದ್ದ ಹಾವೊಂದನ್ನು ವೈದ್ಯರೊಬ್ಬರು ಹೊರತೆಗೆದಿದ್ದಾರೆ. ಕೇಳಲು ವಿಚಿತ್ರ ಎನಿಸಿದರು ಇದು ನಿಜ. ಮಾನವರ ಹೊಟ್ಟೆಯೊಳಗೆ ಹುಳ ತುಂಬುವುದನ್ನು ಕೇಳಿದ್ದೆವು ಆದರೆ ಹಾವು ಇದೆ ಎಂಬುದನ್ನು ನಂಬಲಾಗುತ್ತಿಲ್ಲ. ಆದಾಗ್ಯೂ ಈ ಹಳೆಯ ವಿಡಿಯೋ ಮಾತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಪುಟ್ಟ ಮಕ್ಕಳು ದೊಡ್ಡವರು, ದನಕರುಗಳು, ಪ್ರಾಣಿಗಳು ಹೀಗೆ ಪ್ರತಿಯೊಂದು ಜೀವಿಯ ದೇಹದಲ್ಲೂ ಒಳ್ಳೆಯ ಹಾಗೂ ಕೆಟ್ಟ ಬ್ಯಾಕ್ಟಿರೀಯಾಗಳಿರುತ್ತವೆ. ಹಾಗೆಯೇ ಹೊಟ್ಟೆಯಲ್ಲಿ ಹುಳು ತುಂಬಿದೆ ಎಂದು ದೊಡ್ಡವರು ಪುಟ್ಟ ಮಕ್ಕಳಿಗೆ ಔಷಧಿಯನ್ನು ನೀಡುತ್ತಾರೆ. ಆದರೆ ಇತ್ತೀಚೆಗೆ ನಾವು ಪ್ರತಿನಿತ್ಯ ಸೇವಿಸುವ ವಿಷಾಹಾರದಿಂದಲೇ ನಮ್ಮ ದೇಹದಲ್ಲಿ ಮೊದಲಿನಂತೆ ಜಂತುಹುಳಗಳು ಇರುವುದಿಲ್ಲ ಎಂಬುದು ಕೆಲ ವೈದ್ಯರು ಹೇಳುವ ಮಾತು ಹೀಗಿರುವಾಗ ಮಹಿಳೆಯೊಬ್ಬಳ ಅನ್ನನಾಳದಲ್ಲಿ 4 ಅಡಿ ಉದ್ದದ ಹಾವೊಂದು ಪತ್ತೆಯಾಗಿದೆ ಎಂಬ ವಿಚಿತ್ರ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವುದರ ಜೊತೆ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿದೆ. ಹೀಗೂ ಸಾಧ್ಯವೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಸುದ್ದಿಯ ಜೊತೆ ಮಹಿಳೆಯ ಬಾಯಿಯ ಮೂಲಕ ವೈದ್ಯರು ಹಾವನ್ನು ಹೊರತೆಗೆಯುತ್ತಿರುವ ವಿಡಿಯೋ ಕೂಡ ವೈರಲ್ ಆಗಿದ್ದು ಬೆಚ್ಚಿ ಬೀಳಿಸುತ್ತಿದೆ.

ಅಂದಹಾಗೆ ಇದು 2020ರಲ್ಲಿ ರಷ್ಯಾದಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ವಿಡಿಯೋದಲ್ಲಿ ಕಾಣಿಸುವಂತೆ ಮಹಿಳೆಯೊಬ್ಬಳನ್ನು ಆಸ್ಪತ್ರೆಯ ಬೆಡ್ ಮೇಲೆ ಅನಸ್ತೇಶಿಯಾ ನೀಡಿ ಮಲಗಿಸಿದ್ದು, ಆಕೆಯ ಬಾಯಿಯ ಮೂಲಕ ಪೈಪೊಂದರ ಮುಖೇನ ಇಕ್ಕಳವೊಂದನ್ನು ಇಳಿಸಿ ಹಾವನ್ನು ಅದರ ಮೂಲಕ ಎಳೆದು ತೆಗೆಯುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಅಷ್ಟು ಉದ್ದದ ಹಾವನ್ನು ನೋಡಿ ಒಂದು ಕ್ಷಣ ವೈದ್ಯರೇ ಬೆಚ್ಚಿ ಕಿರುಚುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. 11 ಸೆಕೆಂಡ್‌ಗಳ ಈ ವಿಡಿಯೋವನ್ನು ಒಂದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

@FascinateFlix ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋ ಪೋಸ್ಟ್ ಆಗಿದೆ. ವೈದ್ಯರು ಮಹಿಳೆಯೊಬ್ಬಳ ದೇಹದಿಂದ ಹಾವೊಂದನ್ನು ಹೊರತೆಗೆದರು. ಆಕೆ ನಿದ್ದೆಗೆ ಜಾರಿದ್ದ ವೇಳೆ ಈ ಹಾವು ಆಕೆಯ ದೇಹವನ್ನು ಪ್ರವೇಶಿಸಿತ್ತು ಎಂದು ವಿಡಿಯೋ ಶೇರ್ ಮಾಡಿ ಬರೆದುಕೊಳ್ಳಲಾಗಿದೆ. ಒಂದು ವೇಳೆ ಹಾವು ಬಾಯಿಯ ಮೂಲಕ ಹೊಟ್ಟೆ ಸೇರುವಷ್ಟು ಹೊತ್ತು ಆಕೆ ಏನು ಮಾಡುತ್ತಿದ್ದಳು. ಆಕೆಯೇನು ಕುಂಭಕರ್ಣನ ಸಹೋದರಿಯೇ ಎಂಬ ಪ್ರಶ್ನೆ ಮೂಡದಿರದು.

ಅನೇಕರು ಬಾಯಿಯ ಮೂಲಕ ಉಸಿರಾಡುತ್ತಾರೆ. ಇದೇ ಕಾರಣಕ್ಕೆ ನಿದ್ದೆ ಮಾಡುವ ಸಮಯದಲ್ಲಿ ಬಾಯಿಯನ್ನು ತೆರೆದಿಟ್ಟುಕೊಂಡು ನಿದ್ದೆ ಮಾಡುತ್ತಾರೆ. ಆದರೆ ಹೀಗೆ ಬಾಯಿ ತೆರೆದು ಮಲಗುವ ಮಕ್ಕಳನ್ನು ಪೋಷಕರು ಗದರುವುದುಂಟು. ಬಾಯಿಮುಚ್ಚಿ ಮಲಗು ನೊಣ ಹೋಗುತ್ತೆ ಎಂದು ತಮಾಷೆ ಕೂಡ ಮಾಡುತ್ತಾರೆ. ಆದರೆ ಈ ಮಹಿಳೆಯ ಕತೆ ಕೇಳಿದರೆ ಬಾಯಿ ಬಿಟ್ಟು ಮಲಗುವವರು ಕೂಡ ಕೆಲ ಕಾಲ ಬಾಯಿ ಮೇಲೆ ಕೈ ಇಡುವುದು ಪಕ್ಕಾ.

error: Content is protected !!