ಹುಬ್ಬಳ್ಳಿ: ಅರಗ ಜ್ಞಾನೇಂದ್ರ ಹೋಮ್ ಮಿನಿಸ್ಟರ್ ಆಗುವುದಕ್ಕೆ ನಾಲಾಯಕ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಉರ್ದು ಬರಲ್ಲ ಎನ್ನುವ ಕಾರಣಕ್ಕೆ ಚಂದ್ರು ಹತ್ಯೆ ಆಗಿದೆ ಎಂದು ಅರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ಹೋಮ್ ಮಿನಿಸ್ಟರ್ಗೆ ಅನುಭವವೇ ಇಲ್ಲ. ಗೃಹ ಇಲಾಖೆ ಹ್ಯಾಂಡಲ್ ಮಾಡುವುದಕ್ಕೆ ಬರಲ್ಲ. ಮೈಸೂರಲ್ಲಿ ಗ್ಯಾಂಗ್ ರೇಪ್ ಆದಾಗ ಗೃಹ ಸಚಿವರು ಅಷ್ಟೊತ್ತಿಗೆ ಯಾಕ್ ಹೋಗಿದ್ದರು ಎಂಬ ಹೇಳಿಕೆ ನೀಡಿದ್ದರು. ಅವರು ಹೋಮ್ ಮಿನಿಸ್ಟರ್ ಆಗುವುದಕ್ಕೆ ನಾಲಾಯಕ್, ಮುಖ್ಯಮಂತ್ರಿ ಸಹ ಅವರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ.
ಈ ಹತ್ಯೆ ನಾನು ಖಂಡಿಸುತ್ತೆನೆ. ಹಿಂದೂ ಸತ್ತರು ಜೀವ, ಮುಸ್ಲಿಂ ಸತ್ತರು ಜೀವವೇ. ಹರ್ಷ ಕೊಂದವರನ್ನು ನೇಣಿಗೆ ಹಾಕಿ ಜೀವಾವಧಿ ಶಿಕ್ಷೆ ಕೊಡಿಸಿ ಎಂದು ಸಿದ್ದರಾಮಯ್ಯನವರು ಕಿಡಿಕಾರಿದರು. ಬಿಜೆಪಿ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದೆ. ಜನರ ಮುಂದೆ ಹೋಗುವುದಕ್ಕೆ ಅವರ ಬಳಿ ಸಾಧನೆ ಇಲ್ಲ. ಅದನ್ನು ಮರೆಮಾಚುವುದಕ್ಕೆ ಧಾರ್ಮಿಕ ವಿಚಾರದ ಮೂಲಕ ಮುಂದಾಗಿದ್ದಾರೆ. ಇದು ಅವರಿಗೆ ತಿರುಗುಬಾಣವಾಗುತ್ತದೆ ಎಂದು ವಿಪಕ್ಷ ನಾಯಕ ಟಾಂಗ್ ಕೊಟ್ಟಿದ್ದಾರೆ. ಇಷ್ಟು ದಿನ ಹಲಾಲ್ ಕಟ್, ಹಿಜಾಬ್ ಆಯಿತು. ಈಗ ಮಸೀದಿಯಲ್ಲಿ ಮೈಕ್ ಬ್ಯಾನ್, ಮಾವಿನ ಹಣ್ಣು ವಿಚಾರ ಬಂದಿದೆ. ಮತಗಳ ವಿಭಜನೆ ಮಾಡಬೇಕು ಅಂತ ಹೀಗೆ ಮಾಡುತ್ತಿದ್ದಾರೆ. ಧರ್ಮದ ಹೆಸರಿನ ಮೇಲೆ ಪದ್ದತಿಯ ದಾರಿ ತಪ್ಪಿಸುತ್ತಿದ್ದಾರೆ. ಇದೆಲ್ಲಾ ಹುನ್ನಾರ ಜನರಿಗೆ ಗೊತ್ತಾಗುತ್ತದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.
ಬಿಜೆಪಿ ನಾಯಕರು ಬೆಲೆ ಏರಿಕೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಗೊಬ್ಬರ, ಗ್ಯಾಸ್, ಅಡುಗೆ ಎಣ್ಣೆ, ಎಲ್ಲವೂ ಜಾಸ್ತಿ ಆಗಿದೆ. ಇದರ ಬಗ್ಗೆ ಅವರು ಮಾತನಾಡುವುದಿಲ್ಲ. ಬರೀ ಧಾರ್ಮಿಕ ಭಾವನೆ ಕೆರಳಿಸುವ ಮಾತುಗಳನ್ನಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಸರ್ಕಾರದ ಈ ನೀತಿಯಿಂದ ಹೂಡಿಕೆ ಕರ್ನಾಟಕಕ್ಕೆ ಬರದೇ ತಮಿಳುನಾಡಿಗೆ ಹೋಗುತ್ತಿದೆ. ಎಲ್ಲಾ ಉದ್ಯಮಗಳು ರಾಜ್ಯದಲ್ಲಿ ಮುಚ್ಚಿ ಹೋಗುತ್ತಿವೆ. ನಾವು ಸುಳ್ಳು ಹೇಳಲ್ಲ, ನಾವು ಸತ್ಯ ಹೇಳಿಕೊಂಡು ಜನರ ಮುಂದೆ ಹೋಗುತ್ತೇವೆ. ಬೋಗಸ್ ಧರ್ಮ ಪ್ರಚಾರ ನಾವು ಮಾಡುವುದಿಲ್ಲ ಎಂದಿದ್ದಾರೆ.