ನವದೆಹಲಿ: ರಾಜ್ಯ ರಾಜಕಾರಣವನ್ನು ಬಿಟ್ಟು ದೆಹಲಿಗೆ ನಾನು ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೇರವಾಗಿ ತಿಳಿಸಿದ್ರು. ದೆಹಲಿಗೆ ಸಿದ್ದರಾಮಯ್ಯನವರನ್ನು ದಿಢೀರ್ ಕರೆಸಿಕೊಂಡ ಸೋನಿಯಾ, ನೀವು ದೆಹಲಿಗೆ ಬರಬೇಕು. ಕರ್ನಾಟಕದ ಪ್ರಭಾವಿ ನಾಯಕರಾಗಿರುವ ನೀವು ರಾಷ್ಟ್ರ ಮಟ್ಟದ ರಾಜಕಾರಣಕ್ಕೆ ಬರಬೇಕು ಎಂದು ಸೋನಿಯಾ ಗಾಂಧಿ ಆಹ್ವಾನ ಮಾಡಿದ್ದಾರೆ.
ಈ ಆಹ್ವಾನವನ್ನು ತಿರಸ್ಕರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ನಾನು ಯಾವುದೇ ಕಾರಣಕ್ಕೂ ದೆಹಲಿ ರಾಜಕೀಯಕ್ಕೆ ಬರುವುದಿಲ್ಲ. ದೆಹಲಿ ಮಟ್ಟದಲ್ಲಿ ರಾಜಕಾರಣ ನಿರ್ವಹಣೆ ಬಗ್ಗೆ ನನಗೆ ಅಷ್ಟೊಂದು ಆಸಕ್ತಿ ಇಲ್ಲವೆಂದು ನೇರವಾಗಿ ಹೇಳಿದ್ರು. ಎಂದು ಮೂಲಗಳಿಂದ ತಿಳಿದು ಬಂದಿದೆ. ಒಟ್ಟು ೩೦ ನಿಮಿಷದ ಮಾತುಕತೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಸೋನಿಯಾ ಗಾಂಧಿ ನಡೆಸಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಕೆಲವು ವಿಚಾರಗಳ ಬಗ್ಗೆ ಮಾತನಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಹೇಳಿದ್ದಾರೆ.
ದೆಹಲಿ ರಾಜಕಾರಣ ನನಗೆ ಸರಿಹೋಗುವುದಿಲ್ಲ. ದೆಹಲಿ ಮಟ್ಟದಲ್ಲಿ ರಾಜಕಾರಣ ನಿರ್ವಹಣೆ ಬಗ್ಗೆ ನನಗೆ ಅಷ್ಟೊಂದು ಆಸಕ್ತಿಯು ಸಹ ಇಲ್ಲ. ನಾನು ರಾಜ್ಯದಲ್ಲೇ ಇದ್ದುಕೊಂಡು ಪಕ್ಷದ ಹಿತಕ್ಕಾಗಿ ಯಾವ ಪಾತ್ರ ಬೇಕಾದ್ರು ನಿರ್ವಹಿಸುತ್ತೇನೆ. ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನೂ ಪಕ್ಷ ಸಂಘಟನೆ ಅಂದ್ರೆ ಕೇವಲ ಎಐಸಿಸಿ ಮಟ್ಟ ಅಲ್ಲ. ರಾಜ್ಯ ಮಟ್ಟದಲ್ಲೂ ಪಕ್ಷ ಸಂಘಟಿಸಬೇಕು. ರಾಜ್ಯದಲ್ಲಿ ಇನ್ನೊಮ್ಮೆ ಪಕ್ಷ ಅಧಿಕಾರಕ್ಕೆ ತರುವುದು ನನ್ನ ಜವಾಬ್ದಾರಿಯಾಗಿದೆ.
ದಕ್ಷಿಣ ಭಾರತದಲ್ಲಿ ಕೇರಳ ಮತ್ತು ಕರ್ನಾಟಕದಲ್ಲಿ ಮಾತ್ರ ಪಕ್ಷ ಪ್ರಬಲವಾಗಿ ಉಳಿದಿದೆ. ಕರ್ನಾಟಕ ಮತ್ತು ಕೇರಳದಲ್ಲಿ ಈಗಿರುವ ಶಕ್ತಿ ಕುಂದದಂತೆ ನೋಡಿಕೊಳ್ಳಬೇಕಿದೆ. ದಕ್ಷಿಣ ಭಾರತದಲ್ಲಿ ಯಾವುದೇ ರಾಜ್ಯದಲ್ಲಿ ಪಕ್ಷ ಸಂಘಟನೆ ಭಾಗವಾಗಿ ನನ್ನನ್ನ ಬಳಸಿಕೊಳ್ಳಿ. ಎಐಸಿಸಿ ಮಟ್ಟದ ಅಧಿಕೃತ ಹುದ್ದೆ, ಸ್ಥಾನಮಾನ ನನಗೆ ಯಾವುದೇ ಕಾರಣಕ್ಕೂ ಬೇಡ. ದೆಹಲಿ ರಾಜಕಾರಣ ಮತ್ತು ಭಾಷೆ ಸಮಸ್ಯೆ ಸಹ ನನಗೆ ಅಡ್ಡಿ ಆಗುತ್ತದೆ. ನನಗೀಗ ೭೪ ವರ್ಷ, ಈ ವಯಸ್ಸಿನಲ್ಲಿ ನಾನು ದೇಶ ಸುತ್ತುವುದು ಸುಲಭ ಅಲ್ಲ. ಬೇರೆ ಬೇರೆ ವಾತಾವರಣಕ್ಕೆ ಹೊಂದಿಕೊಂಡು ದೇಶ ಸುತ್ತುವುದು ಕಷ್ಟ. ಯುವಕರಿಗೆ ಆದ್ಯತೆ ಕೊಡಿ, ಯುವಕರಿಗೆ ನಾನು ಸಲಹೆ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.