ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ತಿಳಿಸುವ ನೆಪದಲ್ಲಿ ರಾಜ್ಯ ಬಿಜೆಪಿ ಪಾಳಯ ಕಾಲೆಳೆದಿದೆ. ಐದು ‘ಗ್ಯಾರಂಟಿಗಳ’ ಆಶ್ವಾಸನೆಯನ್ನು ತಕ್ಷಣವೇ ಅನುಷ್ಠಾನಗೊಳಿಸುತ್ತೀರಿ ಎಂದು ನಾವು ನಂಬಿದ್ದೇವೆ ಎಂದು ವ್ಯಂಗ್ಯವಾಡಿದೆ.
ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಮಾಡಲಿದ್ದಾರೆ. ಈ ಶುಭ ಸಂದರ್ಭಕ್ಕೆ ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ರಾಜಕೀಯ ಪಕ್ಷಗಳ ನಾಯಕರು ಸಾಕ್ಷಿಯಾಗಲಿದ್ದಾರೆ. ಇನ್ನು ಇಬ್ಬರು ನಾಯಕರಿಗೆ ಬಿಜೆಪಿ ಟ್ಟೀಟ್ ಮೂಲಕ ಅಭಿನಂದನೆ ತಿಳಿಸುವ ಜತೆಗೆ 5 ಗ್ಯಾರಂಟಿಗಳನ್ನು ಈಡೇರಿಸುವಂತೆ ಒತ್ತಾಯ ಮಾಡಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನವನ್ನು ಸ್ವೀಕರಿಸಲಿರುವ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು.
ತಮ್ಮ ಅವಧಿಯಲ್ಲಿ ಕರ್ನಾಟಕದಲ್ಲಿ ಶಾಂತಿ ನೆಲೆಸಲಿದೆ ಹಾಗೂ ಕನ್ನಡಿಗರು ಸುರಕ್ಷಿತರಾಗಿರುತ್ತಾರೆ ಎಂದು ನಾವು ಭಾವಿಸಿದ್ದೇವೆ. ಅದೇ ರೀತಿ, ಚುನಾವಣಾ ಪೂರ್ವದಲ್ಲಿ ತಾವು ರಾಜ್ಯದ ಜನತೆಗೆ ನೀಡಿದ್ದ ಐದು ‘ಗ್ಯಾರಂಟಿಗಳ’ ಆಶ್ವಾಸನೆಯನ್ನು, ರಾಜಸ್ಥಾನ, ಛತ್ತಿಸ್‌ಗಡ, ಹಿಮಾಚಲದಲ್ಲಿ ಕೈಕೊಟ್ಟ ಹಾಗೆ ಕೊಡದೆ, ತಕ್ಷಣವೇ ಅನುಷ್ಠಾನಗೊಳಿಸುತ್ತೀರಿ ಎಂದು ನಾವು ನಂಬಿದ್ದೇವೆ ಎಂದು ಟ್ಟೀಟ್ ಮೂಲಕ ಕಾಲೆಳೆದಿದೆ.
ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಇಂದು ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಎರಡನೇ ಬಾರಿಗೆ ಸಿಎಂ ಗದ್ದುಗೆ ಏರುತ್ತಿರುವ ಸಿದ್ದರಾಮಯ್ಯ ಅವರ ಜೊತೆ ಡಿಸಿಎಂ ಆಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಅಲ್ಲದೆ ಇದೇ ವೇಳೆ 8 ಸಚಿವರು ಮಂತ್ರಿಗಿರಿ ಸ್ವೀಕಾರ ಮಾಡಲಿದ್ದಾರೆ.