ಬೆಳಗಾವಿ: ನಿನ್ನೆ ಭಾನುವಾರ ಪ್ರತಿಷ್ಠಾಪಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಸ್ಥಳಕ್ಕೆ ಇಂದು ಸೋಮವಾರ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ಸಿದ್ದರಾಮಯ್ಯ ಅನಗೋಳದ ಕನಕದಾಸ ಕಾಲೋನಿಗೆ ತೆರಳಲಿದ್ದಾರೆ. ರಾಯಣ್ಣ ಪುತ್ಥಳಿ ಧ್ವಂಸ ಪ್ರಕರಣ ದಿನದಿಂದ ದಿನಕ್ಕೆ ಗಂಭೀರವಾಗುತ್ತ ಸಾಗಿದ್ದು, ಸಧ್ಯ ಬೆಳಗಾವಿ ಬೂದಿ ಮುಚ್ಚಿದ ಕೆಂಡದಂತಿದೆ.
ಶನಿವಾರ ತಡರಾತ್ರಿ ನಾಡದ್ರೋಹಿ ದುಷ್ಕರ್ಮಿಗಳು ಸಂಗೊಳ್ಳಿ ರಾಯಣ್ಣ ಪುತ್ಥಳಿ ಭಗ್ನ ಮಾಡಿದ್ದರು. ಈ ವೇಳೆ ಪೊಲೀಸ್ ಠಾಣೆಯ ಎದುರು ಜಮಾಯಿಸಿದ್ದ ಸಂಗೊಳ್ಳಿ ರಾಯಣ್ಣ ಸೇನಾ ಯುವಕ ಸಂಘದವರು, ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದಿದ್ದರು.
ನಿನ್ನೆ ಭಾನುವಾರ ಹಬ್ಬದ ಸಂಭ್ರಮದಂತಹ ವಾತಾವರಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಯಿತು. ಈ ಹಿನ್ನೆಲೆಯಲ್ಲಿ ಇಂದು ಸೋಮವಾರ ಬೆಳಗ್ಗೆ 9 ಗಂಟೆಗೆ ಸಿದ್ದರಾಮಯ್ಯ ಆನಗೋಳಕ್ಕೆ ಭೇಟಿ ನೀಡಿ, ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ.