ಕೂಗು ನಿಮ್ಮದು ಧ್ವನಿ ನಮ್ಮದು

ಎಂಪಿ ಅವಧಿ ಮುಗಿದ ಬಳಿಕ ರಾಜಕೀಯಕ್ಕೆ ವಿದಾಯ: ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಘೋಷಣೆ

ಚಾಮರಾಜನಗರ: ಕರ್ನಾಟಕದಲ್ಲಿ ಈಗ ವಿಧಾನಸಭೆ ಚುನಾವಣೆ ಕಾವು ರಂಗೇರುತ್ತಿದೆ. ಇದರ ಮಧ್ಯೆ ಬಿಜೆಪಿ ಕೆಲ ಶಾಸಕರು ಚುನಾವಣೆ ಹಾಗೂ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದರ ಇದೀಗ ಚಾಮರಾನಗರ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಅವರು ರಾಜಕೀಯಕ್ಕೆ ವಿದಾಯ ಹೇಳುವ ಮಾತುಗಳನ್ನಾಡಿದ್ದಾರೆ. ಇಂದು(ಏಪ್ರಿಲ್ 13) ಚಾಮರಾನಗರದ ಗುಂಡ್ಲುಪೇಟೆಯಲ್ಲಿ ನಡೆದ ಬಿಜೆಪೊ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಶ್ರೀನಿವಾಸ ಪ್ರಸಾದ್, ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಲೋಕಸಭೆ ಅವಧಿ ಮುಗಿದ ಕೂಡಲೇ ರಾಜಕೀಯಕ್ಕೆ ವಿದಾಯ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ವರ್ಷ ನನ್ನ ಅವಧಿ ಮುಕ್ತಾಯವಾಗಲಿದೆ. ಆ ಬಳಿಕ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಸುದೀರ್ಘ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ್ದೇನೆ. ಒಟ್ಟಾರೆ ಏಳು ಪ್ರಧಾನ ಮಂತ್ರಿಗಳನ್ನ ಕಂಡಿದ್ದೇನೆ. ಇನ್ನು ಮುಂದೆ ನಾನು ಚುನಾವಣೆ ರಾಜಕೀಯದಿಂದ ಸಕ್ರಿಯವಾಗಿ ಹಿಂದೆ ಸರಿಯುತ್ತೇನೆ ಎಂದು ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದರು.

ಅವರು ಮೂಲತಃ ಕಾಂಗ್ರೆಸ್‌ನಿಂದ ರಾಜಕೀಯ ಆರಂಭಿದ್ದ ಅವರು ನಂತರ ಜನತಾ ದಳ ಸೇರಿದ್ದರು. ಬಳಿಕ ಅವರು ವಾಪಸ್ ಕಾಂಗ್ರೆಸ್‌ಗೆ ಮರಳಿ 2013 ರಲ್ಲಿ ನಂಜನಗೂಡಿನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಆದ ಕೆಲ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತು ಅವರು ಮತ್ತೆ ತಮ್ಮ ಪಕ್ಷವನ್ನು ಬದಲಾಯಿಸಿದರು. 2016, ಡಿಸೆಂಬರ್ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅಲ್ಲದೇ ಬಿಜೆಪಿ 2017ರಲ್ಲಿ ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ 2019 ರಲ್ಲಿ ಚಾಮರಾಜನಗರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಚುನಾವಣೆ ರಾಜಕೀಯದಿಂದ ಬಿಎಸ್ ಯಡಿಯೂರಪ್ಪ ಹಾಗೂ ಕೆಎಸ್ ಈಶ್ವರಪ್ಪ, ದಾವಣಗೆರೆ ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ್ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಅಲ್ಲದೇ ನಿನ್ನೆ ಅಷ್ಟೇ ಬಿಜೆಪಿ ಶಾಸಕ ಎಸ್ ಅಂಗಾರ ಸಹ ರಾಜಕೀಯಕ್ಕೆ ಗುಡ್​ ಬೈ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

error: Content is protected !!