ಹಾಸನ: ಲಾಡ್ಜ್ನಲ್ಲಿ ಅಕ್ರಮ ಮದ್ಯ ಮಾರಾಟದ ವಿಚಾರವಾಗಿ ಅಬಕಾರಿ ಅಧಿಕಾರಿಗಳನ್ನು ಸಂಸದ ಪ್ರಜ್ವಲ್ ರೇವಣ್ಣ ತೀವ್ರ ತರಾಟೆಗೆ ತೆಗೆದುಕೊಂಡರು. ದಿಶಾ ಸಭೆಯಲ್ಲಿ ಮದ್ಯ ಮಾರಾಟದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದ್ದು, ಸಿಎಲ್-7ನಲ್ಲಿ ನಿಯಮ ಉಲ್ಲಂಘನೆ ಮಾಡಿದ ಹಿನ್ನಲೆ ಅಧಿಕಾರಿಗಳ ವಿರುದ್ಧ ಸಂಸದರು ಗರಂ ಆದರು. ಈ ವೇಳೆ ಸಂಸದ ಪ್ರಜ್ವಲ್ ಮಾತಿಗೆ ದನಿಗೂಡಿಸಿದ ಶಾಸಕ ಶಿವಲಿಂಗೇಗೌಡ ಜನರನ್ನು ಯಾಮಾರಿಸುತ್ತಿದ್ದೀರಿ, ನಮ್ಮನ್ನು ಏನು ಕುರಿಗಳು ಅಂತಾ ತಿಳಿದುಕೊಂಡಿದ್ದಿರೇನ್ರೀ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಲಾಡ್ಜ್ನಲ್ಲಿ ಮದ್ಯ ಸೇವನೆ ಮಾಡುತ್ತಿರುವಾಗ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಆರೋಪದ ಬಗ್ಗೆ ಮಾತನಾಡಿದ ಶಾಸಕರು, ನಿಮಗೆ ನಾಚಿಕೆ ಆಗಲ್ವಾ? ಇಷ್ಟೆಲ್ಲಾ ಮಾಡುವುದಾದರೆ ತರಕಾರಿ ಅಂಗಡಿಯಲ್ಲೂ ಅವಕಾಶ ನೀಡಿ. ಎಷ್ಟು ಬಾರ್ ತೆಗೆದಿದ್ದೇವೆ ಎಂದು ಜಾಹೀರಾತು ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೊಸ ಬಾರ್ ತೆರೆಯುವುದನ್ನು ತಡೆಯದಿದ್ದರೆ ರಾಜ್ಯ ಹಾಳಾಗಿಹೋಗುತ್ತದೆ. ಬಾಟಲಿಗೆ ಸಿರೆಂಜ್ ಹಾಕಿ ಎಳೀತಾರೆ, ಅದಕ್ಕೆ ಸ್ಪಿರಿಟ್ ತುಂಬಿಸುತ್ತಾರೆ. ಅದೂ ಒರಿಜಿನಲ್ ಎಣ್ಣೆ ಮಾರಲ್ಲ ಎಲ್ಲಾ ಡ್ಲೂಪ್ಲಿಕೇಟ್ ಎಣ್ಣೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಆದಾಯ ಬರುತ್ತದೆ ಎಂದು ಜನರಿಗೆ ವಿಷ ಕುಡಿಸಬೇಡಿ. ಡೂಪ್ಲಿಕೇಟ್ ಎಣ್ಣೆ ಕುಡಿಸುವ ಬದಲು ವಿಷ ಕುಡಿಸಿ ಎಂದು ಆಕ್ರೋಶ ಹೊರಹಾಕಿದರು.
ಸಿಎಲ್ 7 ಬಾರ್ ಹೆಚ್ಚಳದಿಂದ ಜನರಿಗೆ ಸಮಸ್ಯೆಯಾಗುತ್ತಿರುವ ಆರೋಪ ಹಾಸನ ಜಿಲ್ಲೆಯಲ್ಲಿ ಕೇಳಿಬಂದಿದೆ. ಈ ಬಗ್ಗೆ ಅಸಮಾಧಾನ ಹೊರಹಾಕಿದ ಸಂಸದ ಮತ್ತು ಶಾಸಕರು, ಅಬಕಾರಿ ಇಲಾಖೆ ಅದಿಕಾರಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡರು. ಅಲ್ಲದೆ, ಜಿಲ್ಲೆಯಲ್ಲಿ ಎಷ್ಟು ಬಾರ್ ಓಪನ್ ಆಗಿದೆ, ಎಷ್ಟು ಮಾರಾಟ ಆಗಿದೆ ಎಂಬುದರ ಬಗ್ಗೆ ಮಾಹಿತಿ ಕೊಡಿ ಎಂದು ಅಧಿಕಾರಿಗಳನ್ನು ತಾಕೀತು ಮಾಡಿದ್ದಾರೆ