ಕೂಗು ನಿಮ್ಮದು ಧ್ವನಿ ನಮ್ಮದು

ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ವರ್ಷದ ದಾಖಲೆ ಮಳೆ

ಲಿಂಗನಮಕ್ಕಿ ಜಲಾಶಯಕ್ಕೆ ಹರಿದು ಬಂತು 73,431 ಕ್ಯೂಸೆಕ್ಸ್ ನೀರು.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಭೋರ್ಗರೆಯುತ್ತಿದೆ. ಕಾರ್ಮೋಡಗಳು ಕರಗಿ ಸೂಸುತ್ತಿರುವ ಮಳೆ, ಮಲೆನಾಡನ್ನು ಕತ್ತಲೆಮಯ ಮಾಡಿದೆ. ಹೊಸನಗರ, ಸಾಗರ ತೀರ್ಥಹಳ್ಳಿ ತಾಲೂಕಿನಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಶರಾವತಿ ಕಣಿವೆ ಪ್ರದೇಶದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಲಿಂಗನಮಕ್ಕಿ ಡ್ಯಾಂ ನ ಒಳಹರಿವು ಒಂದೇ ದಿನದಲ್ಲಿ ದಾಖಲೆ ಬರೆದಿದೆ. ಜಲಾಶಯಕ್ಕೆ 73,432 ಕ್ಯೂಸೆಕ್ಸ್ ನೀರು ಹರಿದು ಬಂದಿದೆ. ಗರಿಷ್ಠ 1819 ಅಡಿ ನೀರಿನ ಸಂಗ್ರಹ ಮಟ್ಟ ಹೊಂದಿರುವ ಲಿಂಗನಮಕ್ಕಿ ಡ್ಯಾಂ ನಲ್ಲಿ 1799.15 ಅಡಿ ನೀರು ಸಂಗ್ರಹಗೊಂಡಿದೆ. ನಿನ್ನೆ 1796.60 ಅಡಿ ನೀರು ಸಂಗ್ರಹವಿದ್ದ ಡ್ಯಾಂ ನಲ್ಲಿ ಒಂದೇ ದಿನದಲ್ಲಿ 1799.15 ಅಡಿ ನೀರು ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಡ್ಯಾಂ ನಲ್ಲಿ 29 ಅಡಿ ನೀರು ಹೆಚ್ಚು ಸಂಗ್ರಹಗೊಂಡಿದೆ. ಇನ್ನು ಯೋಜನಾ ಪ್ರದೇಶದಲ್ಲಿ 140.2 ಮಿಮಿ ಮಳೆಯಾಗಿದೆ. ಇದು ಈ ವರ್ಷದ ದಾಖಲೆ ಮಳೆಯಾಗಿದೆ.

ಭದ್ರಾ ಜಲಾಶಯದ ಪಾತ್ರದಲ್ಲೂ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಡ್ಯಾಂ ಗೆ 39286 ಕ್ಯೂಸೆಕ್ಸ್ ನೀರು ಹರಿದು ಬಂದಿದ್ದು, ಒಳಹರಿವು ಹೆಚ್ಚಾಗಿದೆ. ಗರಿಷ್ಠ 186 ಅಡಿ ನೀರಿನ‌ ಮಟ್ಟ ಹೊಂದಿರುವ ಭದ್ರಾ ಡ್ಯಾಂ ನಲ್ಲಿ 171.1 ಅಡಿ ನೀರು ಸಂಗ್ರಹಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಡ್ಯಾಂ ನಲ್ಲಿ ಹದಿನಾಲ್ಕು ಅಡಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಂಡಿದೆ.

ಗಾಜನೂರು ಜಲಾಶಯ ಭರ್ತಿಯಾಗಿದ್ದು. ಒಳಹರಿವಿನ‌ ಪ್ರಮಾಣದಷ್ಟೇ ನೀರನ್ನು ತುಂಗಾ ನದಿಗೆ ಹರಿಬಿಡಲಾಗಿದೆ. 48323 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದ್ದು, ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಶಿವಮೊಗ್ಗ ಹೃದಯಭಾಗದ ತೀರ ಪ್ರದೇಶದ ಜನತೆ ಪ್ರವಾಹದ ಭೀತಿ ಎದುರಿಸುವಂತಾಗಿದೆ.
ವರಾಹಿ ಯೋಜನಾ ಪ್ರದೇಶದಲ್ಲಿ ಮಳೆ ಭೋರ್ಗರೆಯುತ್ತಿದೆ. ಜಿಲ್ಲೆಯಲ್ಲಿ ಇಂದೂ ಕೂಡ ಮಳೆ ಆರ್ಭಟ ಮುಂದುವರೆದಿದೆ. ಕಳೆದ ರಾತ್ರಿಯಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ.

error: Content is protected !!