ಕೂಗು ನಿಮ್ಮದು ಧ್ವನಿ ನಮ್ಮದು

ಶಾಂತಲಾ ನಾಟ್ಯಾಲಯದ ಕಾರ್ಯ ಶ್ಲಾಘನೀಯ: ಗಂಗೂಬಾಯಿ ಮಾನಕರ್

ಬೆಳಗಾವಿ: ಭರತ ಮುನಿ ರಚಿಸಿದ ಭರತ ನಾಟ್ಯ ಕಲೆಯನ್ನು ಭಾರತೀಯರಾದ ನಾವು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದೇವೆ. ಬೆಳಗಾವಿಯ ಶಾಂತಲಾ ನಾಟ್ಯಾಲಯ ಸಾವಿರಾರು ಮಕ್ಕಳಿಗೆ ಭರತನಾಟ್ಯವನ್ನು ಕಲಿಸುವ ಮೂಲಕ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದು ರಾಜ್ಯ ಅಟಲ್ ಜೀ ಜನಸ್ನೇಹಿ ಕೇಂದ್ರದ ನಿರ್ದೇಶಕಿ ಗಂಗೂಬಾಯಿ ಮಾನಕರ್ ಹೇಳಿದ್ದಾರೆ. ಭಾನುವಾರ ಬೆಳಗಾವಿಯಲ್ಲಿ ಶಾಂತಲಾ ನಾಟ್ಯಾಲಯದ 32ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೊರೋನಾದಿಂದಾಗಿ ನಾವೆಲ್ಲ ನಗುವನ್ನು, ಸಂತೋಷಪಡುವುದನ್ನೇ ಮರೆತಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳು ಭರತನಾಟ್ಯ ಕಲೆ ಪ್ರದರ್ಶಿಸುವ ಮೂಲಕ ಎಲ್ಲ ಮುಖದಲ್ಲಿ ನಗುವನ್ನು, ಖುಷಿಯನ್ನು ತರುತ್ತಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕ ಸಂಗೀತ ನಾಟ್ಯ ಅಕಾಡೆಮಿ ಸದಸ್ಯೆ ಹೇಮಾ ವಾಘ್ಮೋಡೆ ಮಾತನಾಡಿ, ಇಂದಿಗೂ ಬಹಳ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಭರತನಾಟ್ಯ ಕಲಿಯಲು ಬರುತ್ತಿರುವುದು ಸಂತೋಷಟ ಸಂಗತಿ. ಶಾತನಾ ನಾಟ್ಯಾಲಯದ ರೇಖಾ ಹೆಗಡೆ ಕಳೆದ 32 ವರ್ಷದಿಂದ ನಿರಂತರವಾಗಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭರತನಾಟ್ಯ ಶಾಲೆಯನ್ನು ನಡೆಸಿಕೊಂಡು ಬರುತ್ತಿರುವುದು ಮೆಚ್ಚುವಂತದ್ದು ಎಂದರು.

ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಸಂಪಾದಕ ಎಂ.ಕೆ.ಹೆಗಡೆ ಮಾತನಾಡಿ, ಭರತ ನಾಟ್ಯವನ್ನು ಶ್ರೀಮಂತಗೊಳಿಸಿದ ಶಾಂತಲಾ ನಾಟ್ಯಾಲಯ ಬೆಳಗಾವಿಯ ಹೆಮ್ಮೆ. 32 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಈ ಸಂಸ್ಥೆಗೆ ಈವರೆಗೂ ರಾಜ್ಯೋತ್ಸವ ಪ್ರಶಸ್ತಿ ಸಿಗದಿರುವುದು ದೊಡ್ಡ ಲೋಪವಾಗಿದೆ. ಈ ವರ್ಷವಾದರೂ ಈ ಸಂಸ್ಥೆಗೆ ಪ್ರಶಸ್ತಿ ನೀಡುವ ಮೂಲಕ ರಾಜ್ಯೋತ್ಸವ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸುವ ಕೆಲಸವಾಗಬೇಕಿದೆ ಎಂದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಬೆಳಗಾವಿಯಲ್ಲಿ ಶಾಂತಲಾ ನಾಟ್ಯಾಲಯದ ಮಾಡಿದ ಸಾಧನೆಯನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಈ ಸಂಸ್ಥೆಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಕೊಡುವ ದಿಸೆಯಲ್ಲಿ ಶಿಫಾರಸ್ಸು ಮಾಡುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ನೂರಾರು ಮಕ್ಕಳಿಂದ ವೈವಿದ್ಯಮಯ ನೃತ್ಯ ಕಾರ್ಯಕ್ರಮ ನಡೆಯಿತು. ಶಾಂತಲಾ ನಾಟ್ಯಾಲಯದ ಮುಖ್ಯಸ್ಥೆ ರೇಖಾ ಹೆಗಡೆ, ನಿರ್ದೇಶಕರಾದ ಶ್ರೀಮತಿ ಹೆಗಡೆ, ಅಶೋಕ ಹೆಗಡೆ, ರೂಪಾ ಮೊದಲಾದವರು ಇದ್ದರು. ನೂರಾರು ಸಂಖ್ಯೆಯಲ್ಲಿ ಮಕ್ಕಳು, ಪಾಲಕರು ಭಾಗವಹಿಸಿದ್ದರು. ಕೇಂದ್ರ ಸರಕಾರದ ಸಾಂಸ್ಕೃತಿಕ ಸಚಿವಾಲಯ ಕಾರ್ಯಕ್ರಮಕ್ಕೆ ಸಹಯೋಗ ಒದಗಿಸಿತ್ತು.

error: Content is protected !!