ಬೆಳಗಾವಿ: ಘನ ಉಚ್ಚ ನ್ಯಾಯಾಲಯವು ನಾಳೆ ಹಿಜಾಬ್ ಕುರಿತಂತೆ ಅಂತಿಮ ತೀರ್ಪನ್ನು ಪ್ರಕಟಿಸಲಿದ್ದು, ಜಿಲ್ಲೆಯಲ್ಲಿ ತೀರ್ಪನ ಪ್ರಕಟಣೆಯ ನಂತರ ಜನರ ಗುಂಪುಗೂಡುವಿಕೆ, ಸಂಭ್ರಮಾಚರಣೆಗಳು, ಪ್ರತಿಭಟನೆಗಳು ಜರುಗುವ ಸಾಧ್ಯತೆಗಳು ಇರುತ್ತದೆ.
ಆದ್ದರಿಂದ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ 1973 ಕಲಂ 144 ರಡಿ ಮಂಗಳವಾರ (ಮಾ.15) ರಂದು ಮುಂಜಾನೆ 6 ಗಂಟೆಯಿಂದ ಮುಂದಿನ ಆದೇಶ ಹೋರಡಿಸುವವರೆಗೆ ಬೆಳಗಾವಿ ಜಿಲ್ಲೆಯಾದ್ಯಂತ ನಿಷೇದಾಜ್ಞೆಯನ್ನು ಹೇರಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೋರಡಿಸಿದ್ದಾರೆ.
ಜಿಲ್ಲಾಧಿಕಾರಿ ಆದೇಶದಲ್ಲಿ ಏನೇನಿದೆ:
⏩ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪ್ಪು ಸೇರಿ ತಿರುಗಾಡಬಾರದು.
⏩ಸಾರ್ವಜನಿಕ ಸಭೆ, ಮೆರವಣಿಗೆ ಮಾಡುವುದನ್ನು ನಿಷೇದಿಸಲಾಗಿದೆ. (ಶವ ಸಂಸ್ಕಾರಕ್ಕೆ, ಹೋಟೆಲ್ ಗಳಿಗೆ, ಚಲನಚಿಂತ್ರ ಮಂದಿರಗಳಿಗೆ, ಧಾರ್ಮಿಕ ಮತ್ತು ಮದುವೆ ಮೆರವಣಿಗೆಗಳಿಗೆ ಈ ಆಜ್ಞೆಯು ಅನ್ವಯವಾಗುವುದಿಲ್ಲ)
⏩ಆಯುಧ, ಮಾರಕಾಸ್ತ್ರ, ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ತಿರುಗಾಡಕೂಡದು.
⏩ಯಾವುದೇ ರೀತಿಯ ಪಟಾಕಿ/ಸಿಡಿಮದ್ದು ಸಿಡಿಸಬಾರದು.
⏩ಸರ್ಕಾರಿ ಬಸ್ಸು ಹಾಗೂ ಇತರೆ ವಾಹನಗಳಿಗೆ ಅಡೆತಡೆ ಉಂಟುಮಾಡಬಾರದು.
ಈ ವಿಷಯವಾಗಿ ಮುಂದಿನ ಸೂಕ್ತ ಕ್ರಮವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಇನ್ನು ನಿಷೇಧಾಜ್ಞೆ ನಡುವೆಯೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯು ಪೂರ್ವ ನಿಗದಿಯಂತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.