ಕೂಗು ನಿಮ್ಮದು ಧ್ವನಿ ನಮ್ಮದು

ಯುವಕನನ್ನು ಸ್ಕೂಟಿಗೆ ಕಟ್ಟಿ ರಸ್ತೆಯಲ್ಲಿ ಎರಡು ಕಿ.ಮೀ ಎಳೆದುಕೊಂಡು ಹೋದ ವಿಡಿಯೋ ವೈರಲ್

ಒಡಿಶಾ: ತಾವು ನೀಡಿದ್ದ ಸಾಲವನ್ನು ಸಮಯಕ್ಕೆ ಸರಿಯಾಗಿ ವಾಪಾಸ್ ಕೊಡಲಿಲ್ಲ ಎಂಬ ಕಾರಣಕ್ಕೆ 22 ವರ್ಷದ ಯುವಕನನ್ನು ತಮ್ಮ ಸ್ಕೂಟಿಗೆ ಹಗ್ಗದಲ್ಲಿ ಕಟ್ಟಿಕೊಂಡು ಟ್ರಾಫಿಕ್ ಇದ್ದ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಒಡಿಶಾದಲ್ಲಿ ಈ ಘಟನೆ ನಡೆದಿದ್ದು, 1500 ರೂ. ಹಣವನ್ನು ವಾಪಾಸ್ ಕೊಡಲಿಲ್ಲ ಎಂದು ಯುವಕನನ್ನು ಸ್ಕೂಟಿಗೆ ಕಟ್ಟಿಹಾಕಿ ಸುಮಾರು 2 ಕಿಲೋಮೀಟರ್ ಎಳೆದುಕೊಂಡು ಹೋಗಲಾಗಿದೆ. ಆ ಸ್ಕೂಟಿಯ ಹಿಂದೆ ಆ ಯುವಕ ಓಡಿಹೋಗುತ್ತಿರುವ ದೃಶ್ಯವನ್ನು ಪಕ್ಕದ ವಾಹನದಲ್ಲಿ ಹೋಗುತ್ತಿದ್ದವರು ವಿಡಿಯೋ ಮಾಡಿದ್ದಾರೆ.

ಒಡಿಶಾದ ಕಟಕ್ ನಗರದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಆ ಸ್ಕೂಟಿಯಲ್ಲಿದ್ದ ಇಬ್ಬರನ್ನು ಬಂಧಿಸಲಾಯಿತು. ಆರೋಪಿಗಳ ವಿರುದ್ಧ ಅಕ್ರಮ ಬಂಧನ, ಅಪಹರಣ ಮತ್ತು ಕೊಲೆ ಯತ್ನದ ಆರೋಪ ಹೊರಿಸಲಾಗಿದೆ ಎಂದು ಕಟಕ್ ನಗರ ಉಪ ಪೊಲೀಸ್ ಆಯುಕ್ತ ಪಿನಾಕ್ ಮಿಶ್ರಾ ಹೇಳಿದ್ದಾರೆ.

ಜಗನ್ನಾಥ್ ಬೆಹೆರಾ ಎಂಬ ಯುವಕನ ಕೈಗಳನ್ನು 12 ಅಡಿ ಉದ್ದದ ಹಗ್ಗದಿಂದ ಕಟ್ಟಲಾಗಿತ್ತು. ಅದರ ಇನ್ನೊಂದು ತುದಿಯನ್ನು ಸ್ಕೂಟಿಗೆ ಕಟ್ಟಲಾಗಿತ್ತು. ಭಾನುವಾರ ಸುಮಾರು 20 ನಿಮಿಷಗಳ ಕಾಲ ಸ್ಟುವರ್ಟ್‌ಪಟ್ನಾ ಚೌಕದಿಂದ 2 ಕಿಲೋಮೀಟರ್‌ಗಿಂತ ಹೆಚ್ಚು ದೂರದ ಸುತಾಹತ್ ಚೌಕದವರೆಗೆ ಜಗನ್ನಾಥ್ ಅವರನ್ನು ಸ್ಕೂಟಿಯಲ್ಲಿ ಎಳೆದುಕೊಂಡು ಹೋಗಲಾಗಿತ್ತು.

ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ, ಸುತಾಹತ್ ಸ್ಕ್ವೇರ್‌ನಲ್ಲಿ ಕೆಲವು ಸ್ಥಳೀಯರು ಬಂದು ಆ 22 ವರ್ಷದ ಯುವಕನನ್ನು ರಕ್ಷಿಸಿದ್ದಾರೆ. ಕಳೆದ ತಿಂಗಳು ಆ ಇಬ್ಬರಿಂದ ಜಗನ್ನಾಥ್ ತನ್ನ ಅಜ್ಜನ ಅಂತ್ಯಕ್ರಿಯೆಗೆ 1500 ರೂ. ಸಾಲವನ್ನು ಪಡೆದಿದ್ದ. ಅದನ್ನು ಸಮಯಕ್ಕೆ ಸರಿಯಾಗಿ ವಾಪಾಸ್ ಕೊಡದ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗಿದೆ ಎನ್ನಲಾಗಿದೆ

error: Content is protected !!