ಕೂಗು ನಿಮ್ಮದು ಧ್ವನಿ ನಮ್ಮದು

ಹುಳ ಬಿದ್ದ ಅಕ್ಕಿ ಬಳಸಿ ಮಕ್ಕಳಿಗೆ ಬಿಸಿಯೂಟ, ಸ್ಥಳೀಯರ ಆಕ್ರೋಶ

ಚಿಕ್ಕಮಗಳೂರು: ಚೀಲದಲ್ಲೇ ಹುಳ ಬಿದ್ದ ಅಕ್ಕಿ ಬಳಸಿ ಅಡುಗೆ ಮಾಡಿ ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದ ಶಿಕ್ಷಕಿಯ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ನಡೆದಿದೆ. ಹುಳ ಬಿದ್ದ ಅಕ್ಕಿಯಲ್ಲೇ ಮಕ್ಕಳಿಗೆ ಬಿಸಿಯೂಟ ನೀಡುತ್ತಿರುವ ಶಿಕ್ಷಕಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಚೀಲದಲ್ಲಿರುವ ಅಕ್ಕಿಯನ್ನು ಬೇಸನ್‍ನಲ್ಲಿ ತುಂಬಿದಾಗ ಅಕ್ಕಿಯಿಂದ ಚಿಕ್ಕ-ಚಿಕ್ಕ ಕಪ್ಪು ಹುಳಗಳು ಓಡಾಡುತ್ತಿವೆ.

ಒಂದೆರಡು ಹುಳಗಳಲ್ಲ. ಅಕ್ಕಿಗಿಂತ ಹೆಚ್ಚಾಗಿಯೇ ಹುಳ ಹಿಡಿದಿದೆ. ಅದನ್ನು ವಾಪಸ್ ಕಳಿಸಬಹುದು ಅಥವಾ ಶುಚಿ ಮಾಡಿ ಅಡುಗೆ ಮಾಡಬಹುದು. ಆದರೆ ಅದೇ ಅಕ್ಕಿ ಬಳಸಿ ಅನ್ನ ಮಾಡಿ ಮಕ್ಕಳಿಗೆ ನೀಡುತ್ತಿದ್ದಾರೆ. ಅನ್ನದಲ್ಲಿ ಹುಳ ಕಂಡ ಮಕ್ಕಳು ಮನೆಗೆ ಬಂದು ಪೋಷಕರಿಗೆ ಹೇಳಿದ್ದಾರೆ. ಪೋಷಕರು ಕೂಡ ಹಲವಾರು ಬಾರಿ ಶಾಲೆಗೆ ಬಂದು ವಿಷಯ ತಿಳಿಸಿ ಹೋಗಿದ್ದಾರೆ. ಆದರೆ ಶಿಕ್ಷಕರು ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಅದೇ ಹುಳ ಬಿದ್ದ ಅಕ್ಕಿಯಲ್ಲೇ ಅನ್ನ ಮಾಡಿ ಮಕ್ಕಳಿಗೆ ಬಡಿಸುತ್ತಿದ್ದರು.

ಮಕ್ಕಳ ಆರೋಗ್ಯದ ಜೊತೆ ಹುಡುಗಾಟ ಆಡುತ್ತಿರುವ ಶಿಕ್ಷಕಿಯನ್ನು ಅಮಾನತುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಹಿಂದೆ ಹಲವು ಬಾರಿ ಅವರ ಗಮನಕ್ಕೆ ತಂದಿದ್ದೇವೆ. ಆದರೂ ಅವರು ಅದನ್ನ ಮುಂದುವರೆಸಿದ್ದಾರೆಂದು ಆರೋಪಿಸಿರುವ ಪೋಷಕರು ಕೂಡಲೇ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

error: Content is protected !!