ಕೂಗು ನಿಮ್ಮದು ಧ್ವನಿ ನಮ್ಮದು

ಆದಿಶಕ್ತಿ ಸವದತ್ತಿ ರೇಣುಕಾ ಎಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ: ಚಿಟಿಗಳ ಮೂಲಕ ಭಕ್ತರ ಚಿತ್ರ-ವಿಚಿತ್ರ ಹರಕೆ

ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಪೀಠ ಸವದತ್ತಿ ಯಲ್ಲಮ್ಮ ದೇವಿಯ ಹುಂಡಿ ಏಣಿಕೆ ಕಾರ್ಯ ನಡೆದಿದ್ದು ಬರೋಬ್ಬರಿ ಒಂದೂವರೇ ಕೋಟಿ ದೇಣಿಗೆ ಸಂಗ್ರಹವಾಗಿದೆ. ಕೆಲ ಭಕ್ತರು ತಮ್ಮ ಹರಕೆಗಳನ್ನ ಪತ್ರದಲ್ಲಿ ಬರೆದು ಹುಂಡಿಗೆ ಹಾಕಿದ್ದು ಚಿತ್ರ-ವಿಚಿತ್ರ ಚೀಟಿಗಳು ಪತ್ತೆಯಾಗಿವೆ. ಅಷ್ಟಕ್ಕೂ ಆ ಚಿಟಿಗಳಲ್ಲಿ ಏನಿತ್ತು ಗೊತ್ತಾ. ಈ ವರದಿ ನೋಡಿ.

ಶ್ರೀಕ್ಷೇತ್ರ ರೇಣುಕಾ ಎಲ್ಲಮ್ಮ

ಉತ್ತರ ಕರ್ನಾಟಕದ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿಯ ರೇಣುಕಾದೇವಿಯ ಕ್ಷೇತ್ರವು ಒಂದು. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶ- ವಿದೇಶಗಳಿಂದ ಲಕ್ಷಾಂತರ ಭಕ್ತರು ಸವದತ್ತಿಗೆ ಬಂದು ದೇವಿಯ ದರ್ಶನ ಪಡೆಯುತ್ತಾರೆ. ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸರಕಾರ ವಿಧಿಸಿದ್ದ ನಿರ್ಬಂಧಗಳು ತೆರವಾಗಿವೆ. ಹೀಗಾಗಿ ನಿತ್ಯ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಹೀಗಾಗಿ ಫೆಬ್ರವರಿ 1 ರಿಂದ ಮಾರ್ಚ್ 15 ರವರೆಗಿನ ಅವಧಿಯಲ್ಲಿ ಸಂಗ್ರಹವಾದ ಹುಂಡಿ ಏಣಿಕೆ ಮಾಡಲಾಗಿದ್ದು ಕೇವಲ 45 ದಿನಗಳಲ್ಲಿ 1.30 ಕೋಟಿ ನಗದು ಹಾಗೂ 12 ಲಕ್ಷದ ಚಿನ್ನ ಮತ್ತು 30 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಈ 45 ದಿನಗಳ ಅವಧಿಯಲ್ಲಿ 2 ಲಕ್ಷಕ್ಕೂ ಅಧಿಕ ಭಕ್ತರು ಯಲ್ಲಮ್ಮದೇವಿಯ ದರ್ಶನ ಪಡೆದಿದ್ದು, ಭಕ್ತರ ಸಂಖ್ಯೆ ದಿಡೀರ್ ಏರಿಕೆಯಿಂದಲೇ ದಾಖಲೆ ಮೊತ್ತದ ದೇಣಿಗೆ ಸಂಗ್ರಹವಾಗಿದೆ.

ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ ಕೋಟಿ ಕೋಟಿ ದೇಣಿಗೆ ಜೊತೆಗೆ ಚಿತ್ರ ವಿಚಿತ್ರ ಹರಕೆ ಚೀಟಿಗಳು ಪತ್ತೆಯಾಗಿವೆ. ಹಣದ ಜೊತೆಗೆ ಹರಕೆ ಚೀಟಿ ಹಾಕಿರುವ ಭಕ್ತೆಯೊಬ್ಬರು ನನ್ನ ಗಂಡನಿಗೆ ಕುಡಿತದ ಚಟ ಬಿಡಿಸು, ಕುಡುಕ ಸ್ನೇಹಿತರನ್ನ ಬಿಡಿಸು, ಕುಡುಕರು ನನ್ನ ಗಂಡನ ಜೊತೆಗೆ ಸ್ನೇಹ ಮಾಡದಂತೆ ಚೀಟಿ ಬರೆದು ಯಲ್ಲಮ್ಮ ದೇವಿಯಲ್ಲಿ ಮನವಿ ಕೋರಿಕೆ ಸಲ್ಲಿಸಿದ್ದಾಳೆ. ಇನ್ನೊರ್ವ ಭಕ್ತರು ನಮ್ಮ ಮಗಳಿಗೆ ನಮಗಿಂತ 100 ಪಟ್ಟು ಅಧಿಕ ಆಸ್ತಿಯಿರುವ ಯುವಕನೊಂದಿಗೆ ಕಲ್ಯಾಣ ಪ್ರಾಪ್ತಿಗೊಳಿಸು ಎಂದಿದ್ದರೆ, ಮತ್ತೊರ್ವರು ಪಿಎಸ್‍ಐ ಹುದ್ದೆ ಕರುಣಿಸು ಎಂದು ಚೀಟಿ ಬರೆದಿದ್ದಾರೆ. ಮತ್ತೊರ್ವ ಭಕ್ತ ಅಮ್ಮ ನನ್ನ ಬಳಿ ಸಾಲ ಪಡೆದವರು ನಿನ್ನ ದಯೆಯಿಂದ ಮರಳಿಸುವಂತೆ ಮಾಡು ಎಂದು ಬರೆದಿದ್ದು ಹೀಗೆ ಭಕ್ತರು ವಿವಿಧ ಬಗೆಯ ಹರಕೆ ಚೀಟಿ ಹಾಕಿದ್ದಾರೆ. ಹೀಗೆ ಭಕ್ತರು ದೇವಿಗೆ ಚೀಟಿ ಬರೆದು ಕೋರಿಕೆ ಸಲ್ಲಿಸಿರುವ ಚೀಟಿಗಳು ಭಾರೀ ವೈರಲ್ ಕೂಡ ಆಗುತ್ತಿವೆ.

ಒಟ್ಟಿನಲ್ಲಿ ಆದಿಶಕ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ ಕೋಟಿ ಕೋಟಿ ಹಣ, ಬೆಳ್ಳಿ, ಬಂಗಾರದ ಜೊತೆಗೆ ವಿವಿಧ ಹರಕೆಯ ಚೀಟಿಗಳು ಪತ್ತೆಯಾಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

error: Content is protected !!