ಬೆಂಗಳೂರು: ರಂಗಭೂಮಿ ಹಿನ್ನೆಲೆಯಿಂದ ಬಂದ ಅಪ್ಪಟ ದೇಸಿ ಪ್ರತಿಭೆ ಸಂಚಾರಿ ವಿಜಯ್ ಇಂದು ಕೊನೆಯುಸಿರೆಳೆದಿದ್ದಾರೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಚಾರಿ ವಿಜಯ್ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಮೂಲದವರಾದ ಸಂಚಾರಿ ವಿಜಯ್ ತಮ್ಮ ಶ್ರಮದಿಂದಲೇ ಬೆಳೆದವರು. ಅಭಿನಯದ ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಕೊಂಡಿದ್ದರು. ಸಂಚಾರಿ ನಾಟಕ ತಂಡದಲ್ಲಿ ತೊಡಗಿಕೊಂಡಿದ್ದ ಅವರು ಸಂಚಾರಿ ವಿಜಯ್ ಎಂದೇ ಖ್ಯಾತರಾಗಿದ್ದರು. ಇನ್ನು ಲಾಕ್ಡೌನ್ನಲ್ಲೂ ಉಸಿರು ಎಂಬ ತಂಡ ಕಟ್ಟಿಕೊಂಡು ಕೊರೋನಾ ಸೋಂಕಿತರು ಹಾಗೂ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ನೆರವಾಗುತ್ತಿದ್ದರು. ಬಹಳ ಕಷ್ಟಪಟ್ಟು ಸಿನಿರಂಗದಲ್ಲಿ ತಮ್ಮದೇ ಆದ ಜಾಗ ಮಾಡಿಕೊಂಡಿದ್ದರು. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಸಂಚಾರಿ ವಿಜಯ್ ಅವರಿಗೆ ನಾನು ಅವನಲ್ಲ ಅವಳು ಸಿನಿಮಾದಲ್ಲಿ ನಿರ್ವಹಿಸಿರುವ ತೃತೀಯ ಲಿಂಗಿ ಪಾತ್ರದಲ್ಲಿನ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿತ್ತು. ಹೋಟೆಲ್ನಲ್ಲಿ ಕೆಲಸ ಮಾಡುತ್ತಲೇ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡು, ಅಭಿನಯದ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದ ಸಂಚಾರಿ ವಿಜಯ್ ಅವರ ನಿಧನಕ್ಕೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಡಿಸಿಎಂ ಅಶ್ವತ್ಥನಾರಾಯಣ ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇನ್ನು ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಕಿಚ್ಚ ಸುದೀಪ್ ಅವರು, ಸಂಚಾರಿ ವಿಜಯ್ ಅವರ ಅಗಲಿಕೆ ತುಂಬಾ ನೋವು ತಂದಿದೆ. ಲಾಕ್ಡೌನ್ಗಿಂತ ಮುಂಚೆ ಹಲವಾರು ಸಲ ಅವರನ್ನು ಭೇಟಿ ಮಾಡಿದ್ದೇನೆ. ರಿಲೀಸ್ ಆಗಬೇಕಿದ್ದ ಅವರ ಸಿನಿಮಾ ಬಗ್ಗೆ ಕಾತರರಾಗಿದ್ದರು. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಬರೆದುಕೊಂಡಿದ್ದಾರೆ. ನಟ ವಸಿಷ್ಠ ಸಿಂಹ ಸಹ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ವಿಜಯ್ ಅವರ ಫೋಟೋ ಹಂಚಿಕೊಂಡಿದ್ದು, ನೋವಿನಿಂದ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.