ಬೆಂಗಳೂರು: ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ನಟ ಸಂಚಾರಿ ವಿಜಯ್ ಇಂದು ಮುಂಜಾನೆ ವಿಧಿವಶರಾಗಿದ್ದು, ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸ್ಯಾಂಡಲ್ವುಡ್ ನಟರು, ರಂಗಭೂಮಿ ಕಲಾವಿದರು,ಸಂಚಾರಿ ವಿಜಯ್ ಅವರ ಅಭಿಮಾನಿಗಳು ಸೇರಿದಂತೆ ನೂರಾರು ಮಂದಿ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದು, ನಟ ಶಿವರಾಜ್ ಕುಮಾರ್ ಸಂಚಾರಿ ವಿಜಯ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಮಾತುಗಳೇ ಬರ್ತಿಲ್ಲ, ಇಷ್ಟು ಚಿಕ್ಕ ವಯಸ್ಸಿನಲ್ಲಿ ದೂರಾಗಿರೋದು, ನಮಗೂ ನೋವಿದೆ. ನಮಗಿಂತಾನೂ ಅವರ ಕುಟುಂಬಕ್ಕೆ ಇನ್ನು ಕಷ್ಟ. ಅವರ ಜೊತೆ ನಾನು ಕೂಡ ಸಿನಿಮಾ ಮಾಡಿದ್ದೆ. 10-12 ದಿನ ಜೊತೆಲೇ ಇದ್ದೆವು. ಕಲಿಯುವ ಆಸಕ್ತಿ ತುಂಬಾ ಇತ್ತು. ನ್ಯಾಷನಲ್ ಅವಾರ್ಡ್ ಯಾಕೆ ಸಿಗುತ್ತೆ ಅನ್ನೋದಕ್ಕೆ ಅವರ ನಟನೆಯೆ ಉದಾಹರಣೆ. ಅವರು ನಮ್ಮ ಮನಸಿನಲ್ಲಿ ಸದಾ ಇರ್ತಾರೆ. ಅವರ ಮನೆಯವರಿಗೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ. ವಿಜಯ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂಚಾರಿ ವಿಜಯ್ ಜೊತೆಗಿನ ನೆನಪುಗಳನ್ನು ನೆನೆದು ಭಾವುಕರಾದರು.