ಕೂಗು ನಿಮ್ಮದು ಧ್ವನಿ ನಮ್ಮದು

ಮುದುಕನ ಮದುವೆಯಾಗಿ ಚಿನ್ನ ದೋಚಿ ಎರಡನೇ ಪತ್ನಿ ಪರಾರಿ: ಕಂಗಾಲಾದ ವೃದ್ಧ..!

ಬೆಂಗಳೂರು: ಎರಡನೇ ವಿವಾಹದ ನೆಪದಲ್ಲಿ 62 ವರ್ಷದ ವ್ಯಕ್ತಿಯೊಬ್ಬರಿಗೆ ಟೋಪಿ ಹಾಕಿ 2.30 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗಿರುವ ಘಟನೆ ಕಾಟನ್‌ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಟನ್‌ಪೇಟೆ ಒಟಿಸಿ ರಸ್ತೆಯ ಷಣ್ಮುಗಂ ಮೋಸ ಹೋಗಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ತಮಿಳುನಾಡು ಮೂಲದ ಮಲ್ಲಿಕಾ ಅಲಿಯಾಸ್‌ ಮಲ್ಗರ್‌ (35) ಪತ್ತೆಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಬ್ರೋಕರ್‌ ಮೂಲಕ ಷಣ್ಮುಗಂ ಅವರನ್ನು ಪರಿಚಯ ಮಾಡಿಕೊಂಡು ಬಳಿಕ ಎರಡನೇ ಮದುವೆ ಮಾಡಿಕೊಂಡು ಆರೋಪಿ ವಂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮೊದಲ ಪತ್ನಿ ವಿಚ್ಛೇದನ ನೀಡಿದ್ದ ಷಣ್ಮುಗಂ, ತಮ್ಮ 10 ವರ್ಷದ ಮಗನ ಜತೆ ನೆಲೆಸಿದ್ದರು. ಮೆಕ್ಯಾನಿಕ್‌ ಆಗಿ ಜೀವನ ಸಾಗಿಸುತ್ತಿದ್ದ ಅವರು, ಇತ್ತೀಚೆಗೆ ಎರಡನೇ ವಿವಾಹವಾಗಲು ನಿರ್ಧರಿಸಿದ್ದರು. ಆಗ ತಮ್ಮ ಪರಿಚಿತ ತಮಿಳುನಾಡಿನ ಸೇಲಂ ಮೂಲದ ಬ್ರೋಕರ್‌ ಮುನಿಯಮ್ಮ ಅಲಿಯಾಸ್‌ ಮಣಿಯನ್ನು ಅವರು ಸಂಪರ್ಕಿಸಿದ್ದರು. ಕೆಲ ದಿನಗಳ ಬಳಿಕ ತಮಿಳುನಾಡಿನ ದಿಂಡಿಗಲ್ಲಿನಲ್ಲಿ ಹೆಣ್ಣು ಇದೆ ಎಂದು ಷಣ್ಮುಗಂಗೆ ಮುನಿಯಮ್ಮ ಹೇಳಿದ್ದಳು. ಅಂತೆಯೇ ಜ.4ರಂದು ತನ್ನ ಜತೆ ಮಲ್ಲಿಕಾ, ಮತ್ತಿಬ್ಬರು ಪುರುಷರನ್ನು ಬೆಂಗಳೂರಿಗೆ ಕರೆತಂದು ಷಣ್ಮುಗಂ ಮನೆಯಲ್ಲಿ ಮುನಿಯಮ್ಮ ಮದುವೆ ಮಾಡಿಸಿದ್ದಳು. ಅಂದೇ ರಾತ್ರಿ ಮುನಿಯಮ್ಮ ಹಾಗೂ ಆಕೆಯ ಸಹಚರರು .35 ಸಾವಿರ ಕಮಿಷನ್‌ ಪಡೆದು ಮರಳಿದ್ದರು.

ಇತ್ತ ಷಣ್ಮುಗಂ ಜತೆ ಕೆಲ ದಿನಗಳು ಜೀವನ ಸಾಗಿಸಿದ ಮಲ್ಲಿಕಾ, ಜ.10ರ ಮಧ್ಯಾಹ್ನ 64 ಗ್ರಾಂ ಚಿನ್ನಾಭರಣ ಹಾಗೂ 700 ಗ್ರಾಂ ಬೆಳ್ಳಿ ವಸ್ತುಗಳ ಸಮೇತ ಪರಾರಿಯಾಗಿದ್ದಾಳೆ. ಇತ್ತ ಕೆಲಸದ ನಿಮಿತ್ತ ಹೊರ ಹೋಗಿದ್ದ ಷಣ್ಮುಗಂ ಕೆಲ ಹೊತ್ತಿನ ಬಳಿಕ ಮನೆಗೆ ಬಂದಾಗ ಪತ್ನಿ ನಾಪತ್ತೆ ಗೊತ್ತಾಗಿದೆ. ಪತ್ನಿಗೆ ಎಲ್ಲೆಡೆ ಹುಡುಕಾಟ ನಡೆಸಿದ ಅವರು, ಬ್ರೋಕರ್‌ ಮುನಿಯಮ್ಮಗೆ ಕರೆ ಮಾಡಿ ವಿಚಾರಿಸಿದಾಗ ಸಂಪರ್ಕ ಕಡಿತವಾಗಿದೆ. ಕೊನೆಗೆ ತಾವು ಮೋಸ ಹೋಗಿರುವುದು ಅರಿವಾಗಿ ಕಾಟನ್‌ಪೇಟೆ ಠಾಣೆಗೆ ಅವರು ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!