ರಿಷಬ್ ಶೆಟ್ಟಿ ಈ ಹೆಸರು ಇದೀಗ ಎಲ್ಲರಿಗೂ ಪರಿಚಿತ. ಕುಂದಾಪುರದ ಪ್ರಶಾಂತ್ ಶೆಟ್ಟಿ ಎಂಬ ಹುಡುಗ ವಿಶ್ವವೇ ಚಂದನವನದತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ. ಕಾಂತಾರ ಸಿನಿಮಾದ ಮೂಲಕ ತುಳುನಾಡ ಸಂಸ್ಕೃತಿಯನ್ನು ಬೆಳ್ಳಿಪರದೆಯ ಮೇಲೆ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಆ ನಟನೆ, ಕತೆ, ಹಾಡು, ನೃತ್ಯ, ಸಂಗೀತ ಪ್ರತಿಯೊಂದು ಸಹ ನೋಡುಗರ ಮನಸೆಳೆಯುವಂತಿದೆ. ಸಿನಿಪ್ರಿಯರ ಹೃದಯ ಗೆದ್ದ ಕಾಂತಾರ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಸದ್ದು ಮಾಡುತ್ತಿದೆ. ಈ ಎಲ್ಲ ಅಬ್ಬರ ಆರ್ಭಟಗಳ ಮಧ್ಯೆ ಶೆಟ್ರ ಫಸ್ಟ್ ಲವ್ ಬಗ್ಗೆ ರೋಚಕ ಮಾಹಿತಿ ಸಿಕ್ಕಿದೆ. ರಿಷಬ್ ಶೆಟ್ಟಿಯವರ ಲೈಫ್ನ ಫಸ್ಟ್ ಲವ್ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಯಾರೇ ಆಗಿರಲಿ ಅವರ ಜೀವನದ ಫಸ್ಟ್ ಲವ್ ಯಾವಾಗಲೂ ಬೆಸ್ಟ್ ಆಗಿರುತ್ತೆ. ರಿಷಬ್ ಶೆಟ್ಟಿ ಜೀವನದಲ್ಲಿ ಸಹ ಸೂಪರ್ ಆದ ಒಂದು ಪ್ರೇಮಕಹಾನಿ ಇತ್ತು. ರಿಷಬ್ ಶೆಟ್ಟಿ ಅವರಿಗೆ ಶಾಲೆಯಲ್ಲಿ ಓದುವಾಗಲೇ ಲವ್ ಆಗಿತ್ತು. ಆಗಲೇ ಅವರು ಒಂದು ಹುಡುಗಿಗೆ ತಮ್ಮ ಹೃದಯವನ್ನು ಕೊಟ್ಟುಬಿಟ್ಟಿದ್ದರು. ರಿಷಬ್ ಶೆಟ್ಟಿ ಪ್ರೀತಿಸಿದ ಮೊದಲ ಹುಡುಗಿ ಹೆಸರು ರತ್ನಾವತಿ. ಅವರ ತರಗತಿಯಲ್ಲಿ ಓದುತ್ತಿದ್ದ ಸಹಪಾಠಿ ರತ್ನಾವತಿಗೆ ರಿಷಬ್ ಶೆಟ್ಟಿ ಫಸ್ಟ್ ಟೈಮ್ ಮನಸೋತಿದ್ದರು.
ಇಂಟರೆಸ್ಟಿಂಗ್ ವಿಚಾರ ಎಂದರೆ ರಿಷಬ್ ಶೆಟ್ಟಿ ಅವರು ಲವ್ ಮಾಡುವ ವಿಚಾರವನ್ನು ತನ್ನ ಪಕ್ಕದಲ್ಲಿ ಕೂರುವ ಹುಡುಗನಿಗೆ ಮಾತ್ರ ಹೇಳಿದ್ದರು. ರತ್ನಾವತಿಯ ಮೇಲೆ ಪ್ರೀತಿ ಆಗಿರುವ ವಿಚಾರವನ್ನು ಆ ಹುಡುಗ ಬಿಟ್ರೆ ಬೇರಾರಿಗೂ ರಿಷಬ್ ಹೇಳಿರಲಿಲ್ಲ. ಆದರೆ ರತ್ನಾವತಿಯ ಮೇಲೆ ಲವ್ ಆಗೋಕೆ ಕಾರಣ ತುಂಬಾ ವಿಚಿತ್ರ, ವಿಶೇಷವಾಗಿತ್ತು. ರಿಷಬ್ ಅವರ ಪಕ್ಕದಲ್ಲಿ ಕೂರುತ್ತಿದ್ದ ಆ ಹುಡುಗ ರತ್ನಾವತಿ ಮೇಲೆ ಯಾಕೆ ಲವ್ ಆಗಿದೆ ಎಂದು ಕೇಳಿದಾಗ, ನನ್ನ ಅಮ್ಮನ ಹೆಸರು ರತ್ನಾವತಿ, ಅವಳ ಹೆಸರೂ ರತ್ನಾವತಿ ಹಾಗಾಗಿ ಪ್ರೀತಿ ಆಗಿದೆ ಎಂದು ರಿಷಬ್ ಹೇಳಿದ್ದರಂತೆ.
ಈ ಲವ್ ಕಹಾನಿಯಿಂದಲೇ ಮುಂದೆ ರಿಷಬ್ ಪೇಚಿಗೆ ಸಿಲುಕಿದ್ದರು. ಅವರ ಸ್ನೇಹಿತರು ರಿಷಬ್ ಅವರನ್ನು ಇದೇ ವಿಚಾರವಾಗಿ ಬ್ಲಾಕ್ಮೇಲ್ ಮಾಡುತ್ತಿದ್ದರಂತೆ. ರಿಷಬ್ ತಂದೆ ಬೆಂಗಳೂರಿನಿಂದ ಬಂದಾಗ ತಪ್ಪದೆ ಚಾಕಲೇಟ್ ಕೊಡಬೇಕಾಗಿತ್ತಂತೆ. ಹೀಗೆ ಒಂದು ವರ್ಷಗಳ ಕಾಲ ರಿಷಬ್ ರತ್ನಾವತಿ ವಿಚಾರವಾಗಿ ಸ್ನೇಹಿತರಿಗೆ ಚಾಕಲೇಟ್ ಲಂಚ ಕೊಡಬೇಕಾಗುತ್ತಿತ್ತಂತೆ. ಕೊನೆಗೆ ಇದನ್ನು ನಾಗರತ್ನ ಎನ್ನುವ ಅವರ ಟೀಚರ್ಗೆ ಸಹ ಗೊತ್ತಾಗಿತ್ತಂತೆ.
ಆದರೆ ಚಾಣಾಕ್ಷತನದಿಂದ ರಿಷಬ್ ಟೀಚರ್ ಬಳಿ ಈ ವಿಷಯಕ್ಕೆ ಟ್ವಿಸ್ಟ್ ಕೊಟ್ಟಿದ್ದರಂತೆ. ರಿಷಬ್ ಟೀಚರ್ ಬಳಿ, ಇದಕ್ಕೂ ತಮಗೂ ಸಂಬಂಧವಿಲ್ಲ, ಹುಡುಗರೇ ಈ ಲವ್ ವಿಚಾರ ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದರಂತೆ. ಇದನ್ನು ಕೇಳಿದ ಟೀಚರ್ ಹುಡುಗರಿಗೆ ಚೆನ್ನಾಗಿ ಬೆಂಡೆತ್ತಿದ್ದರಂತೆ. ಹೀಗೆ ರಿಷಬ್ ಅವರ ಕಾಂತಾರ ಸಿನಿಮಾದ ಬ್ಲಾಕ್ ಬಸ್ಟರ್ ಹಿಟ್ ಮಧ್ಯೆ ಅವರ ಫಸ್ಟ್ ಲವ್ ಕೂಡ ಸುದ್ದಿಯಾಗುತ್ತಿದೆ.