ಬೆಳಗಾವಿ: ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಮುಂಬೈನಿಂದ ವಾಪಸ್ಸಾದ ಬೆನ್ನಲ್ಲೇ ಮತ್ತಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ಸಾಹುಕಾರ್ ನಡೆ ತೀವ್ರ ಕುತೂಹಲ ಮೂಡಿಸಿದೆ. ಸಾಹುಕಾರ್ ರಮೇಶ್ ಜಾರಕಿಹೊಳಿ ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಬೆಳಗಾವಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಹೊರಡಲಿರುವ ಸಾಹುಕಾರ್ ಗೆ ಮಂತ್ರಿ ಸ್ಥಾನ ಮರಳಿ ಸುಗುವುದು ಬಹುತೇಕ ಖಚಿತವಾಗಿದ್ದು, ಮರಳಿ ಸಚಿವ ಸ್ಥಾನ ಪಡೆಯುವ ಮುನ್ನ ಸುತ್ತೂರು ಮಠಕ್ಕೆ ಸಾಹುಕಾರ್ ರಮೇಶ್ ಜಾರಕಿಹೊಳಿ ಭೇಟಿ ನೀಡುತ್ತಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ವಿಶೇಷ ವಿಮಾನದ ಮೂಲಕ ಸಹೋದರ ಲಖನ್ ಜಾರಕಿಹೊಳಿ ಹಾಗೂ ಅಳಿಯ ಅಂಬಿರಾವ್ ಪಾಟೀಲ್ ಜೊತೆ ಮೈಸೂರಿಗೆ ಬರಲಿರುವ ರಮೇಶ್ ಜಾರಕಿಹೊಳಿ, ಅಲ್ಲಿಂದ ಸುತ್ತೂರು ಮಠಕ್ಕೆ ತೆರಳಿ ಸ್ವಾಮಿಜಿ ಭೇಟಿ ಮಾಡಲಿದ್ದು, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಚರ್ಚಿಸಲಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡ್ತಾರೆ ಅನ್ನೊ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರಕ್ಕೆ ಹಾರಿದ್ದ ಜಾರಕಿಹೊಳಿ ಬ್ರದರ್ಸ್ ಎರಡು ದಿನಗಳ ನಂತರ ಗೋಕಾಕ್ ಕ್ಕೆ ವಾಪಸ್ಸಾಗಿದ್ರು. ಸತತ ಎರಡು ದಿನಗಳ ಕಾಲ ಮುಂಬೈನಲ್ಲಿ ಉಳಿದಿದ್ದ ಜಾರಕಿಹೊಳಿ ಬ್ರದರ್ಸ್ ಮಹಾರಾಷ್ಟ್ರದ ಮಾಜಿ ಸಿಎಂ ದೇವೆಂದ್ರ ಫಡ್ನವಿಸ್ ಸೇರಿದಂತೆ ಹಿರಿಯ ಬಿಜೆಪಿ ಮುಖಂಡರ ಜೊತೆಗೆ ರಹಸ್ಯ ಮಾತುಕತೆ ನಡೆಸಿರುವ ಬಗ್ಗೆ ಮಾಹಿತಿ ಇದೆ. ಇನ್ನು ನಿನ್ನೆಯಷ್ಟೆ ಗೋಕಾಕ್ ನಲ್ಲಿ ಸರ್ಕಾರದ ಕೆಲ ಯೋಜನೆಗಳ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಟ್ಯಾಬ್ ವಿತರಿಸಿ ಮಾತನಾಡಿದ ಸಾಹುಕಾರ್ ರಮೇಶ್ ಜಾರಕಿಹೊಳಿ, ರಾಜೀನಾಮೆ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲ್ಲ. ಆದರೆ ತಮ್ಮ ಆಪ್ತರ ಬಳಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದ ಸಾಹುಕಾರ್ ಶನಿವಾರ ಎಲ್ಲವೂ ಗೊತ್ತಾಗಲಿದೆ ಎಂದಿದ್ದು ಹೀಗಾಗಿ ಇಂದಿನ ಸಾಹುಕಾರ್ ಮೈಸೂರು ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.