ಮುಂಬೈ: ಶೇರು ಮಾರುಕಟ್ಟೆಯ ಅತೀ ದೊಡ್ಡ ಹೆಸರು, ಬಿಲಿಯನೇರ್ ಉದ್ಯಮಿ ರಾಕೇಶ್ ಜುಂಜುನ್ವಾಲಾ ಭಾನುವಾರ ಮುಂಜಾನೆ ನಿಧನರಾದ್ರು. 62 ವರ್ಷ ವಯಸ್ಸಿನ ರಾಕೇಶ್ ಜುಂಜುನ್ವಾಲಾ ಅವರನ್ನು ಮುಂಜಾನೆ 6.45ಕ್ಕೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆತರಲಾಯಿತು ಎಂದು ಮೂಲಗಳು ತಿಳಿಸಿವೆ. 1960ರಲ್ಲಿ ಹೈದರಾಬಾದ್ ನಲ್ಲಿ ಜನಿಸಿದ ರಾಕೇಶ್ ಜುಂಜುನ್ವಾಲಾ, 1985ರಲ್ಲಿ ಶೇರು ಮಾರುಕಟ್ಟೆಗೆ ಕಾಲಿಟ್ಟರು. 5000 ರೂ ನಿಂದ ವಹಿವಾಟು ಆರಂಭಿಸಿದ್ದ ರಾಕೇಶ್ ಹನ್ನೊಂದು ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುವಷ್ಟು ಬೆಳೆದಿದ್ದರು.
ಸಕ್ರಿಯ ಹೂಡಿಕೆದಾರರಾಗಿರುವ ಜುಂಜುನ್ವಾಲಾ ಅವರು ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್ಟೈನ್ಮೆಂಟ್ ಪ್ರೈವೇಟ್ ನ ಅಧ್ಯಕ್ಷರಾಗಿದ್ದಾರೆ. ಲಿಮಿಟೆಡ್ ಮತ್ತು ಪ್ರೈಮ್ ಫೋಕಸ್ ಲಿಮಿಟೆಡ್, ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್, ಬಿಲ್ಕೇರ್ ಲಿಮಿಟೆಡ್, ಪ್ರಜ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರೊವೊಗ್ ಇಂಡಿಯಾ ಲಿಮಿಟೆಡ್, ಕಾನ್ಕಾರ್ಡ್ ಬಯೋಟೆಕ್ ಲಿಮಿಟೆಡ್, ಇನ್ನೋವಸಿಂತ್ ಟೆಕ್ನಾಲಜೀಸ್ ಲಿಮಿಟೆಡ್, ಮಿಡ್ ಡೇ ಮಲ್ಟಿಮೀಡಿಯಾ ಕಂಪನಿ ಲಿಮಿಟೆಡ್, ನಾಗಾರ್ಜುನಾ ಕಂಪನಿ ಲಿಮಿಟೆಡ್, ವೈಸರಾಯ್ ಹೋಟೆಲ್ಸ್ ಲಿಮಿಟೆಡ್ ಮತ್ತು ಟಾಪ್ಸ್ ಸೆಕ್ಯುರಿಟಿ ಲಿಮಿಟೆಡ್ ನ ನಿರ್ದೇಶಕರ ಮಂಡಳಿಯಲ್ಲಿದ್ದಾರೆ.
ಇತ್ತೀಚೆಗಷ್ಟೇ ಅವರು ಆಕಾಶ ಏರ್ ಎಂಬ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿದ್ದರು. ಆಗಸ್ಟ್ 7ರಂದು ಇದರ ಮೊದಲ ಹಾರಾಟ ನಡೆದಿತ್ತು. ರಾಕೇಶ್ ಜುಂಜುನ್ ವಾಲಾ ನಿಧನಕ್ಕೆ ಮಾಜಿ ಕ್ರಿಕೆಟಿಗ ವೀರೆಂದ್ರ ಸೆಹವಾಗ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ