ಕೂಗು ನಿಮ್ಮದು ಧ್ವನಿ ನಮ್ಮದು

ಚುನಾವಣೆಗೆ ಮಳೆ ಅಡ್ಡಿ! ಇವತ್ತು ರಾಜ್ಯದ ವಿವಿಧೆಡೆ ವರುಣನ ಕಾರುಬಾರು: ಯಾವ್ಯಾವ ಜಿಲ್ಲೆಗಿದೆ ಎಚ್ಚರಿಕೆ ಗಂಟೆ?

ಕರ್ನಾಟಕದಲ್ಲಿ ಇಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಆದರೆ ಚುನಾವಣೆಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮುಂದಿನ 2 ದಿನಗಳಲ್ಲಿ ದಕ್ಷಿಣ ರಾಜ್ಯದಲ್ಲಿ ಹಲವು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಿದ್ದು, ಆಗ್ನೇಯ ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದಲ್ಲಿ ಸೋಮವಾರ ಬೆಳಗ್ಗೆ ವಾಯುಭಾರ ಕುಸಿತವು ಸಂಭವಿಸಿದೆ. ಇಂದು ಚಂಡಮಾರುತವಾಗಿ ರೌದ್ರ ರೂಪ ತಾಳಬಹುದು ಎಂದು ಐಎಂಡಿ ತಿಳಿಸಿದೆ.

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ತಿಳಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇನ್ನು 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ 30-40 ಕಿಮೀ ವೇಗದಲ್ಲಿ ಗಾಳಿ, ಮಿಂಚು-ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ದೇಶದಲ್ಲಿ ಹವಾಮಾನ ಪರಿಸ್ಥಿತಿ:

ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ರೂಪುಗೊಂಡ ಸೈಕ್ಲೋನ್ ಮೋಚಾ ಹಗಲಿನಲ್ಲಿ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದ ಮೇಲೆ ಹಾದುಹೋಗುತ್ತದೆ. ಈ ಸಮಯದಲ್ಲಿ ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿರುತ್ತದೆ. ಜೊತೆಗೆ ಬಲವಾದ ಗಾಳಿ ಮತ್ತು ಮಳೆ ಬೀಳಬಹುದು. ಇಂದು ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಈ ಚಂಡಮಾರುತವು ಮೇ 12 ರ ನಂತರ ಬಾಂಗ್ಲಾದೇಶದ ಕಡೆಗೆ ಈಶಾನ್ಯಕ್ಕೆ ಚಲಿಸುತ್ತದೆ. ಆದರೆ ಕಳೆದ 15 ವರ್ಷಗಳಿಂದ ಮ್ಯಾನ್ಮಾರ್‌ ನಲ್ಲಿ ಮೇ ತಿಂಗಳಲ್ಲಿ ಸೈಕ್ಲೋನ್ ಭೀತಿ ಇರಲಿಲ್ಲ. ಮೇ 02, 2008 ರಂದು, ದಕ್ಷಿಣ ಮ್ಯಾನ್ಮಾರ್‌ಗೆ ಅಪ್ಪಳಿಸಿದ ಕೊನೆಯ ಚಂಡಮಾರುತವೆಂದರೆ ಅದು ನರ್ಗೀಸ್.

ಇದು ಕಳೆದ 24 ಗಂಟೆಗಳಲ್ಲಿ ದೇಶದ ಸ್ಥಿತಿ:

ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಫರಾಬಾದ್, ಲಡಾಖ್ ಮತ್ತು ಹಿಮಾಚಲ ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಹಿಮಪಾತ ಸಂಭವಿಸಿದೆ. ಉತ್ತರಾಖಂಡದಲ್ಲೂ ಒಂದೋ ಎರಡೋ ಕಡೆ ತುಂತುರು ಮಳೆಯೊಂದಿಗೆ ಲಘು ಹಿಮಪಾತವಾಗಿದೆ. ಅಸ್ಸಾಂ, ಛತ್ತೀಸ್‌ಗಢ, ಪೂರ್ವ ಮಧ್ಯಪ್ರದೇಶ, ವಿದರ್ಭ, ಮರಾಠವಾಡ ಮತ್ತು ಹರಿಯಾಣ, ಉತ್ತರ ಪ್ರದೇಶ ಮತ್ತು ರಾಯಲಸೀಮಾ ಭಾಗಗಳಲ್ಲಿ ಲಘು ಮಳೆಯಾಗಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದ ಹಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 5 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿದೆ.

ಮುಂದಿನ 24 ಗಂಟೆಗಳ ಹವಾಮಾನ:

ಏಜೆನ್ಸಿಯ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ಹಿಮಾಲಯದ ವಿವಿಧ ಸ್ಥಳಗಳಲ್ಲಿ ಲಘು ಮಳೆ ಮತ್ತು ಹಿಮಪಾತವಾಗಬಹುದು. ಇದರ ನಂತರ ಹವಾಮಾನವು ಶುಷ್ಕವಾಗಿರುತ್ತದೆ. ಸಿಕ್ಕಿಂ, ದಕ್ಷಿಣ ಛತ್ತೀಸ್‌ಗಢ, ಕರ್ನಾಟಕ ಒಳನಾಡು ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕ, ಕೇರಳ, ತಮಿಳುನಾಡಿನ ಬೆಟ್ಟಗಳು, ಅರುಣಾಚಲ ಪ್ರದೇಶ, ದಕ್ಷಿಣ ಕೊಂಕಣ ಮತ್ತು ಗೋವಾ ಮತ್ತು ದಕ್ಷಿಣ ಮಧ್ಯ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ಅಂಡಮಾನ್ ದ್ವೀಪದಲ್ಲಿ ಸಾಧಾರಣ ಮಳೆ:

ಮುಂದಿನ 2 ರಿಂದ 3 ದಿನಗಳವರೆಗೆ ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಸಮುದ್ರದ ಸ್ಥಿತಿ ತುಂಬಾ ಕೆಟ್ಟದಾಗಿರಲಿದೆ. ಗಾಳಿಯ ವೇಗ ಗಂಟೆಗೆ 50 ರಿಂದ 60 ಕಿಮೀ ತಲುಪುವ ಸಾಧ್ಯತೆಯಿದೆ. ಸಮುದ್ರದಲ್ಲಿ ಭಾರೀ ಅಲೆಗಳು ಏಳಬಹುದು. ಇದರಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ

error: Content is protected !!