ಬೆಂಗಳೂರು: ಕರ್ನಾಟಕದಲ್ಲಿ ಹಿಂಗಾರು ಮಾರುತಗಳೂ ಈ ವರ್ಷ ಮಳೆ ಸುರಿಸುವ ಸಾಧ್ಯತೆಯಿದೆ. ರಾಜ್ಯದ ತುಮಕೂರು, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ಕೊಡಗು ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಮಳೆಯಾಗಲಿದೆ. ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ. ನಿನ್ನೆಯಿಂದಲೇ ಅ.29 ರಾಜ್ಯದ ಹಲವೆಡೆ ಮೋಡ ಕವಿದ ವಾತಾವಣವಿದ್ದು, ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಬೆಂಗಳೂರಿನಲ್ಲಿಯೂ ನಿನ್ನೆಯಿಂದ ಅಲ್ಲಲ್ಲಿ ಮಳೆಯಾಗಿದ್ದು, ನ 2ರಿಂದ ಐದು ದಿನಗಳ ಕಾಲ ಮಳೆ ವ್ಯಾಪಕವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಿಂಗಾರು ಮಳೆ
ಪ್ರತಿ ವರ್ಷವೂ ದೀಪಾವಳಿಯ ನಂತರ ಮಳೆ ಕಡಿಮೆಯಾಗಿ ಚಳಿ ಹೆಚ್ಚಾಗುವುದು ವಾಡಿಕೆ. ಈ ವರ್ಷ ತಾಪಮಾನ ಕುಸಿದು ಚಳಿ ಹೆಚ್ಚಾದರೂ ಮಳೆ ಕಡಿಮೆಯಾಗಿಲ್ಲ. ಪ್ರತಿ ವರ್ಷ ಜೂನ್ ತಿಂಗಳಲ್ಲಿ ಮುಂಗಾರು ಮತ್ತು ಅಕ್ಟೋಬರ್ನಿಂದ ಹಿಂಗಾರು ಆರಂಭವಾಗುವುದು ವಾಡಿಕೆ. ಆದರೆ ಈ ವರ್ಷ ಹಿಂಗಾರು ಅಕ್ಟೋಬರ್ ತಿಂಗಳ ಕೊನೆಯ ಭಾಗದಲ್ಲಿ ಆರಂಭವಾಗಿದೆ.
ಹಿಂಗಾರು ಮಾರುತಗಳ ಪ್ರಭಾವದಿಂದ ಪಶ್ಚಿಮ ಕೇಂದ್ರ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯ ಮೇಲ್ಮೈ ಉಷ್ಣಾಂಶ ಕಡಿಮೆಯಾಗಿದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ವಿಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಆರಂಭವಾಗಿದೆ. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಈ ವರ್ಷ ಹಿಂಗಾರು ಮಳೆ ಚುರುಕಾಗಿ ಇರಬಹುದು ಎಂದು ನಿರೀಕ್ಷಿಸಲಾಗಿದೆ.