ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆ ಗುಡುಗು, ಮಿಂಚು ಸಹಿತ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ನಗರದ ರಸ್ತೆ, ಜಂಕ್ಷನ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತುಕೊಂಡು ಅವಾಂತರ ಸೃಷ್ಟಿಸಿದೆ. ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಅಬ್ಬರಿಸುತ್ತಿರುವ ಮಳೆರಾಯ ಶುಕ್ರವಾರವೂ ತನ್ನ ಅಬ್ಬರವನ್ನು ಮುಂದುವರೆಸಿದೆ. ಶಿವಾನಂದ ವೃತ್ತ, ಮಲ್ಲೇಶ್ವರ, ಎಂಜಿ ರಸ್ತೆ, ಡಬ್ಬಲ್ ರೋಡ್, ಆನಂದ್‌ರಾವ್ ವೃತ್ತ, ಶೇಷಾದ್ರಿ ರಸ್ತೆ, ಮೆಜೆಸ್ಟಿಕ್, ಚಾಮರಾಜಪೇಟೆ ಸೇರಿ ನಗರ ಹಲವು ಬಡಾವಣೆಗಳು ಭಾರಿ ಮಳೆಯಾಗಿದೆ. ಧಾರಾಕಾರ ಮಳೆಯಿಂದ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಆತಂಕ ಉಂಟಾಗಿತ್ತು. ನಗರದಲ್ಲಿ ಬೆಳಗ್ಗೆಯೆಲ್ಲ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ ಸಣ್ಣದಾಗಿ ಮಳೆಯಾಗಿ ನಂತರ ತಣ್ಣಗಾಗಿತ್ತು. ರಾತ್ರಿ 7ರ ನಂತರ ನಗರದ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ
ಹಲವು ಮರ ಧರೆಗೆ:
ಮಳೆಯಿಂದಾಗಿ ಹೆಬ್ಬಾಳದ ಎನ್‌ಇಟಿ ಬಸ್ ನಿಲ್ದಾಣ, ಸಂಜಯನಗರ, ವಿಜಯನಗರ ಸೇರಿದಂತೆ ವಿವಿಧ ಕಡೆ ಮರ ಬಿದ್ದಿದ್ದು, ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಅಲ್ಲದೆ, ಹಲವು ಕಡೆಗಳಲ್ಲಿ ಮರದ ರೆಂಬೆಗಳು ಬಿದ್ದಿರುವ ವರದಿಯಾಗಿದೆ.
ವಿದ್ಯಾಪೀಠದಲ್ಲಿ ಹೆಚ್ಚು ಮಳೆ
ವಿದ್ಯಾಪೀಠದಲ್ಲಿ 6.2 ಸೆಂ.ಮೀ, ನಾಯಂಡಹಳ್ಳಿ 5.95, ಹಂಪಿ ನಗರ 5.75, ಅಗ್ರಹಾರ ದಾಸರಹಳ್ಳಿ 5.3, ನಂದಿನಿ ಬಡಾವಣೆ 5.2, ರಾಜರಾಜೇಶ್ವರಿ ನಗರ 5.1, ಕೊಟ್ಟಿಗೆಪಾಳ್ಯ 5, ಪೀಣ್ಯ ಕೈಗಾರಿಕಾ ಪ್ರದೇಶ 4.8, ರಾಜರಾಜೇಶ್ವರಿ ನಗರ 4.5, ಕೆಂಗೇರಿ 4.45, ಮಾರುತಿ ಮಂದಿರ ವಾರ್ಡ್ 4.3, ನಾಗಪುರ 4.2, ಬೇಗೂರು, ಹೆಮ್ಮಿಗೆಪುರ, ಚೊಕ್ಕಸಂದ್ರ ತಲಾ 4 ಸೆಂ.ಮೀ ಮಳೆಯಾಗಿದೆ.
ವಾರಾಂತ್ಯ ಮಳೆ:
ವಾರಾಂತ್ಯದ ಶನಿವಾರ ಮತ್ತು ಭಾನುವಾರವೂ ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.