ಯಲ್ಲಾಪುರ: ತಾಲೂಕಿನ ವಿವಿಧೆಡೆ ವಾರದಿಂದ ವ್ಯಾಪಕ ಮಳೆ ಸುರಿದಿದೆ. ಇದರಿಂದ ಗಣೇಶ ಚತುರ್ಥಿಯ ಸಂಭ್ರಮಕ್ಕೆ ನೀರೆರಚಿದಂತಾಗಿದೆ. ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆನೀರು ತುಂಬಿ, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸರ್ಕಾರಿ ಪ.ಪೂ. ಕಾಲೇಜಿನ ಬಳಿ ಎರಡು ವಿದ್ಯುತ್ ಕಂಬಗಳು ಮುರಿದ ಪರಿಣಾಮ ವಿದ್ಯುತ್ ವ್ಯತ್ಯಯವಾಗಿದೆ. ಗ್ರಾಮೀಣ ಭಾಗದಲ್ಲೂ ಮಳೆಯಿಂದ ಅವಾಂತರ ಸಂಭವಿಸಿದ್ದು, ಆನಗೋಡ, ದೋಣಗಾರ, ಇಡಗುಂದಿ, ನಂದೊಳ್ಳಿ, ಹುತ್ಕಂಡ ಭಾಗಗಳಲ್ಲಿ ಹಳ್ಳಗಳು ತುಂಬಿ ಹರಿದವು. ಅಡಕೆ ತೋಟ, ಭತ್ತದ ಗದ್ದೆಗಳು ಜಲಾವೃತವಾದವು. ಇಡಗುಂದಿ ಗ್ರಾಪಂ ವ್ಯಾಪ್ತಿಯ ಅರಬೈಲಿನಿಂದ ಕೆಳಾಸೆಗೆ ಹೋಗುವ ರಸ್ತೆಯಲ್ಲಿ ಹಳ್ಳ ಸೇತುವೆಯ ಮೇಲೆ ಹರಿದು ಓಡಾಟಕ್ಕೆ ತೊಂದರೆ ಉಂಟಾಯಿತು.
ಕಿತ್ತು ಹೋದ ರಸ್ತೆ: ಚವತ್ತಿ ಬಳಿ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯೇ ಬಿರುಕು ಬಿಟ್ಟಿದ್ದು, ಲಾರಿ, ಬಸ್ನಂತಹ ವಾಹನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡಿದೆ. ಚವತ್ತಿ ಬಳಿ ರಸ್ತೆ ಪಕ್ಕದ ಗದ್ದೆ, ತೋಟಗಳಿಗೆ ನುಗ್ಗಿದ ನೀರು, ರಭಸದಿಂದ ರಸ್ತೆಯತ್ತ ನುಗ್ಗಿದ್ದು, ಬಿರುಕು ಮೂಡಿ ರಸ್ತೆ ಕಿತ್ತು ಹೋಗಿದೆ. ಮತ್ತೆ ಕುಸಿದ ಸೂರಿಮನೆ ರಸ್ತೆ: ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ತುಡಗುಣಿ-ಸೂರಿಮನೆ ಸಂಪರ್ಕ ರಸ್ತೆ ಮತ್ತೆ ಕುಸಿತಕ್ಕೊಳಗಾಗಿದೆ. ಸೂರಿಮನೆ ಊರಿಗೆ ಸಂಪರ್ಕ ಕಡಿತಗೊಂಡಿದೆ. ಗ್ರಾಪಂ ಅಧ್ಯಕ್ಷೆ ರೂಪಾ ಪೂಜಾರಿ, ಜಿಪಂ ಸ.ಕಾ.ನಿ ಅಭಿಯಂತರ ಅಶೋಕ ಬಂಟ, ಗ್ರಾಪಂ ಮಾಜಿ ಸದಸ್ಯ ರಾಮಚಂದ್ರ ಭಟ್ಟಸೂರಿಮನೆ, ಗ್ರಾಪಂ ಸದಸ್ಯರಾದ ಖೈತಾನ್ ಡಿಸೋಜ, ಅಶೋಕ ಪೂಜಾರಿ, ಕುಪ್ಪಯ್ಯ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
3ನೇ ಬಾರಿ ಕುಸಿದ ಸೇತುವೆ: ಕಳೆದ ಮಳೆಗಾಲದಲ್ಲಿ ಸೂರಿಮನೆ ರಸ್ತೆ ಕುಸಿದಿತ್ತು. ಇಲ್ಲಿ ತಾತ್ಕಾಲಿಕ ದುರಸ್ತಿ ಕ್ರಮ ಕೈಗೊಳ್ಳಲಾಗಿತ್ತು. ನಂತರ ಈ ಬಾರಿ ಜೋರಾದ ಮಳೆಯ ಪರಿಣಾಮ ಮತ್ತೆ ಕುಸಿತ ಉಂಟಾಗಿತ್ತು. ಇದೀಗ ಮೂರನೇ ಬಾರಿ ಸೇತುವೆ ಕುಸಿದಿದೆ. ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ಹಾಸ್ಪುರ ಬಳಿ ಗಣಪತಿ ಹಾಸ್ಪುರ ಎಂಬ ರೈತರ ಗದ್ದೆ ಏರಿ ಒಡೆದು, ಹಳ್ಳದ ನೀರು ನುಗ್ಗಿ ನಾಟಿ ಮಾಡಿದ ಭತ್ತದ ಗದ್ದೆಗೆ ಹಾನಿ ಉಂಟುಮಾಡಿದೆ. ಗದ್ದೆಯ ತುಂಬೆಲ್ಲ ಕಲ್ಲು, ಮಣ್ಣಿನ ರಾಶಿ ಬಂದು ಬಿದ್ದಿದೆ. ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ
ಶುಕ್ರವಾರದಿಂದ ಶನಿವಾರ ಬೆಳಗ್ಗೆ 8.30ರ ತನಕ ಮಲೆನಾಡಿನ ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಬೆಳಗಾವಿಗೆ, ಶನಿವಾರದಿಂದ ಭಾನುವಾರ ಬೆಳಗ್ಗೆ 8.30ರ ತನಕ ಮಲೆನಾಡಿನ ಜಿಲ್ಲೆಗಳ ಜೊತೆಗೆ ಮೈಸೂರು, ಚಾಮರಾಜನಗರ ಜಿಲ್ಲೆಗೆ ಯೆಲ್ಲೋ ಅಲರ್ಚ್ ಪ್ರಕಟಿಸಲಾಗಿದೆ. ಭಾನುವಾರದಿಂದ ಸೋಮವಾರ ಬೆಳಗ್ಗೆ 8.30ರ ತನಕ ಕರಾವಳಿ, ಮಲೆನಾಡು ಜಿಲ್ಲೆಗಳ ಜೊತೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜ ನಗರ ಮತ್ತು ತುಮಕೂರು ಜಿಲ್ಲೆಯಲ್ಲಿ ಭಾರಿ ಮಳೆ ಅಪ್ಪಳಿಸಲಿದೆ. ಆದರೆ ಸೋಮವಾರದ ಬಳಿಕ ಮಳೆ ಇನ್ನಷ್ಟುವ್ಯಾಪಕವಾಗಲಿದ್ದು ಮಲೆನಾಡು, ಕರಾವಳಿ ಜಿಲ್ಲೆಗಳ ಜೊತೆಗೆ ಒಳನಾಡಿನ ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ.