ಹವಾಮಾನ ಮುನ್ಸೂಚನೆ: ಇಂದಿನಿಂದ ಸತತ 4 ದಿನಗಳ ಕಾಲ ದೇಶದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಇಂದಿನಿಂದ ಮುಂದಿನ 4 ದಿನಗಳವರೆಗೆ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆ ಮುಂದುವರಿಯಲಿದ್ದು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಮುಂದಿನ ನಾಲ್ಕು ದಿನಗಳ ಕಾಲ ದಕ್ಷಿಣ ಪೆನಿನ್ಸುಲರ್ ಭಾರತ, ಉಪ-ಹಿಮಾಲಯನ್ ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಈಶಾನ್ಯ ಭಾರತದಲ್ಲಿ ಧಾರಾಕಾರ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೇ ಎನ್ನಲಾಗಿದೆ.
ಈ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ:
ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಮಧ್ಯಪ್ರದೇಶದಲ್ಲಿ ಸೆಪ್ಟೆಂಬರ್ 1, ಬಿಹಾರದಲ್ಲಿ ಸೆಪ್ಟೆಂಬರ್ 2 ರ ನಡುವೆ ಮಳೆಯ ಮುನ್ಸೂಚನೆ ಇದೆ. ಅದೇ ಸಮಯದಲ್ಲಿ, ಸೆಪ್ಟೆಂಬರ್ 3 ರವರೆಗೆ, ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಅಂತೆಯೇ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಸೆಪ್ಟೆಂಬರ್ 4, 2022 ರಂದು ಧಾರಾಕಾರ ಮಳೆ ಬೀಳಲಿದೆ ಎಂದು ಭವಿಷ್ಯ ನುಡಿದಿದೆ.
ಹವಾಮಾನ ಇಲಾಖೆ ಪ್ರಕಾರ, ಬಿಹಾರದಲ್ಲಿ ಸೆಪ್ಟೆಂಬರ್ 3 ರವರೆಗೆ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 2ರವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ವೇಳೆ ಬಿರುಗಾಳಿ ಸಹಿತ ಸಿಡಿಲಿನ ಭೀತಿಯೂ ಇದೆ ಎಂದು ಐಎಂಡಿ ತಿಳಿಸಿದೆ. ಇದೇ ವೇಳೆ, ಹವಾಮಾನ ಇಲಾಖೆಯು, ಗುಡುಗು ಸಿಡಿಲಿನ ಭೀತಿ ಇರುವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತಮ್ಮ ಮನೆಗಳಲ್ಲಿಯೇ ಇರುವಂತೆ ಮನವಿ ಮಾಡಿದೆ. ಈ ಮಧ್ಯೆ, ಬಿಹಾರದ ಗಯಾ ಜಿಲ್ಲೆಯಲ್ಲಿ ಮೂವರು, ರೋಹ್ತಾಸ್‌ನಲ್ಲಿ ಇಬ್ಬರು ಮತ್ತು ಔರಂಗಾಬಾದ್ ಮತ್ತು ಕೈಮೂರ್‌ನಲ್ಲಿ ತಲಾ ಒಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಇಂದು ಕೂಡ ಪೂರ್ವ ಉತ್ತರ ಪ್ರದೇಶದಲ್ಲಿ ಮಳೆ:
ಉತ್ತರ ಪ್ರದೇಶದ ಸುಮಾರು 18 ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಅಣೆಕಟ್ಟುಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಆಗಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಈ ಬಾರಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಆಯುಕ್ತರ ಕಚೇರಿಯಿಂದ ಬಂದಿರುವ ವರದಿ ಪ್ರಕಾರ, ಪ್ರಸ್ತುತ ರಾಜ್ಯದ 12 ಜಿಲ್ಲೆಗಳ 959 ಗ್ರಾಮಗಳ 2,31,026 ಜನರು ಸಂತ್ರಸ್ತರಾಗಿದ್ದಾರೆ. ಇಂದೂ ಕೂಡ ಉತ್ತರ ಪ್ರದೇಶದ ಪೂರ್ವ ಭಾಗಗಳಲ್ಲಿ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ.
ಕೇರಳದಲ್ಲಿ ಮಳೆ ಮುಂದುವರಿದಿದೆ:
ಬುಧವಾರವೂ ಕೇರಳದ ಹಲವು ಭಾಗಗಳಲ್ಲಿ ಮಳೆ ಮುಂದುವರಿದಿದೆ. ತಮಿಳುನಾಡು ಮತ್ತು ತೆಲಂಗಾಣ, ರಾಯಲಸೀಮಾದ ಪಶ್ಚಿಮ ವಿದರ್ಭದ ಬಳಿ ಚಂಡಮಾರುತದಿಂದಾಗಿ ಸೆಪ್ಟೆಂಬರ್ 3 ರವರೆಗೆ ಕೇರಳ ಮತ್ತು ಲಕ್ಷದ್ವೀಪದ ಬಹುತೇಕ ಭಾಗಗಳಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಐಎಂಡಿ 14 ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಜಾರಿ ಮಾಡಿದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ಇಂದು ದೆಹಲಿಯ ಹವಾಮಾನ ಹೇಗಿರುತ್ತದೆ?
ದೆಹಲಿಯಲ್ಲಿ ಆಗಸ್ಟ್ ನಲ್ಲಿ ಕೇವಲ 41.6 ಮಿ.ಮೀ. ಮಳೆ ದಾಖಲಾಗಿದ್ದು, 14 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ. ಇದಕ್ಕೆ ಕಾರಣ ವಾಯುವ್ಯ ಭಾರತದಲ್ಲಿ ಹವಾಮಾನ ವ್ಯವಸ್ಥೆ ಇಲ್ಲದಿರುವುದು. ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಮೂರು ಕಡಿಮೆ ಒತ್ತಡದ ಪ್ರದೇಶಗಳ ಅಭಿವೃದ್ಧಿ ಈ ತಿಂಗಳು ಮಳೆ ಕೊರತೆಗೆ ಕಾರಣವೆಂದು ಹವಾಮಾನಶಾಸ್ತ್ರಜ್ಞರು ಹೇಳುತ್ತಾರೆ, ಇದು ಮಾನ್ಸೂನ್ ಅನ್ನು ಮಧ್ಯ ಭಾರತದ ಕಡೆಗೆ ಎಳೆದಿದೆ ಮತ್ತು ದೀರ್ಘಕಾಲದವರೆಗೆ ಉತ್ತರಕ್ಕೆ ಚಲಿಸಲು ಅವಕಾಶ ನೀಡಲಿಲ್ಲ. ಇನ್ನು ಐದಾರು ದಿನಗಳಲ್ಲಿ ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದ್ದರೂ ಉತ್ತಮ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ.