ಕೂಗು ನಿಮ್ಮದು ಧ್ವನಿ ನಮ್ಮದು

ಮಣ್ಣಲ್ಲಿ ಮಣ್ಣಾದ ಧ್ರುವನಾರಾಯಣ, ಮಿಂಚಿ ಮರೆಯಾದ ಕಾಂಗ್ರೆಸ್‌ನ ಧ್ರುವ ತಾರೆ ಇನ್ನು ನೆನಪು ಮಾತ್ರ

ಚಾಮರಾಜನಗರ: ಸರಳತೆ, ಮಿತ ಭಾಷಿ, ಸಜ್ಜನಿಕೆ, ವಿನಯತೆಯ ಸಹಕಾರ ಮೂರ್ತಿಯಂತಿದ್ದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಣ್ಣಲ್ಲಿ ಮಣ್ಣಾಗಿದ್ದಾರೆ. ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಬಳಿ ತೋಟದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿದೆ. ತಂದೆ, ತಾಯಿ ಸಮಾಧಿ ಪಕ್ಕದಲ್ಲೇ ಧ್ರುವನಾರಾಯಣ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪುತ್ರರಾದ ದರ್ಶನ್, ಧೀರನ್ ಅಂತಿಮ ವಿಧಿವಿಧಾನ ಪೂರೈಸಿದರು. ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಶಾಮನೂರು ಶಿವಶಂಕರಪ್ಪ, ಜಿ.ಟಿ.ದೇವೇಗೌಡ, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್, ಆರ್.ನರೇಂದ್ರ, ಪುಟ್ಟರಂಗಶೆಟ್ಟಿ, ಹರ್ಷವರ್ಧನ್, ಅನಿಲ್ ಚಿಕ್ಕಮಾದು, ಡಾ.ಯತೀಂದ್ರ, ಡಾ.ಪುಷ್ಪಾ ಅಮರನಾಥ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ರು. ಅಪಾರ ಜನಸ್ತೋಮ ನೆರದಿದ್ದು ಅಗಲಿದ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಲಾಯಿತು.

ಹಳೇ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯರ ನಂತರ ನಾಯಕನಾಗಿ ಬೆಳೆದ ಧ್ರವನಾರಾಯಣ ಅವರು ನಿನ್ನೆ(ಮಾರ್ಚ್ 11) ಹೃದಯಾಘಾತದಿಂದ ನಿಧನ ಹೊಂದಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರ ಹಠಾತ್ ನಿಧನ ಇಡೀ ರಾಜ್ಯವನ್ನೇ ದಿಗ್ಬ್ರಮೆಗೊಳಿಸಿದೆ. ಅಜಾತ ಶತ್ರುವಿನ ಅಗಲಿಕೆಯಿಂದ ಕಾಂಗ್ರೆಸ್ಗೂ ಆಘಾತವಾಗಿದೆ. ಮೊನ್ನೆ ಸಂಜೆವರೆಗೂ ಪಕ್ಷದ ಕೆಲಸದಲ್ಲಿ ಬ್ಯುಸಿಯಾಗಿದ್ದ ಧ್ರುವನಾರಾಯಣ್‌, ರಾತ್ರಿ ಮೈಸೂರಿನ ವಿಜಯನಗರದಲ್ಲಿರೋ ತಮ್ಮ ನಿವಾಸದಲ್ಲೇ ನಿದ್ದೆಗೆ ಜಾರಿದ್ರು. ನಿನ್ನೆ ಬೆಳಗಾಗ್ತಿದ್ದಂತೆ ಪಕ್ಷದ ಕೆಲಸದ ಬಗ್ಗೆ ಪ್ಲಾನ್‌ ಮಾಡಿಕೊಂಡಿದ್ದ ನಾಯಕನಿಗೆ ಬೆಳಗ್ಗೆ ಇದ್ದಕ್ಕಿದ್ದಂತೆ ರಕ್ತದ ವಾಂತಿಯಾಗಿದೆ. ಈ ವೇಳೆ ಉಸಿರಾಡುವಾಗ ರಕ್ತ ಶ್ವಾಸಕೋಶದೊಳಗೆ ಹೋಗಿದ್ದರಿಂದ, ಹೃದಯಾಘಾತ ಆಗಿದೆ. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ರೂ ಯಾವ ಪ್ರಯೋಜನ ಆಗಿಲ್ಲ. ಬೆಳಗ್ಗೆ 6.30 ರ ಹೊತ್ತಿಗೆ ಕಾಂಗ್ರೆಸ್‌ನ ಧ್ರುವತಾರೆ ಕಣ್ಮರೆಯಾಗಿತ್ತು .

ಐದು ನಿಮಿಷದ ಮುಂಚೆ ಆರಾಮಾಗೇ ಇದ್ದ ತಂದೆಯ ಸಾವಿನ ಸುದ್ದಿ ಧ್ರುವನಾರಾಯಣ ಕುಟುಂಬಸ್ಥರಿಗೆ ಭಾರಿ ಆಘಾತವನ್ನೇ ನೀಡಿತ್ತು. ಆಸ್ಪತ್ರೆಯಿಂದ ಧ್ರುವನಾರಾಯಣ ಅವರ ಪಾರ್ಥಿವ ಶರೀರವನ್ನ ವಿಜಯನಗರ ನಿವಾಸಕ್ಕೆ ಶಿಫ್ಟ್​ ಮಾಡುತ್ತಿದ್ದಂತೆ ಕುಟುಂಬಸ್ಥರು & ಮಕ್ಕಳ ಆಕ್ರಂದ ಮುಗಿಲು ಮುಟ್ಟಿತ್ತು. ಮಧ್ಯರಾತ್ರಿಯಾದ್ರೂ ಅಂತಿಮ ದರ್ಶನ ಪಡೆಯುತ್ತಿದ್ದವರ ಸಂಖ್ಯೆ ಕಡಿಮೆ ಆಗಿರಲಿಲ್ಲ. ಬೆಳಗ್ಗೆ ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತದ ಮೂಲಕ‌ ಮೆರವಣಿಗೆ ನಡೆಸಿ ಕಾಂಗ್ರೆಸ್ ಕಚೇರಿ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಸ್ವಗ್ರಾಮ ಹೆಗ್ಗವಾಡಿಗೆ ಧ್ರುವನಾರಾಯಣ ಪಾರ್ಥಿವ ಶರೀರವನ್ನು ತಂದು ಅಭಿಮಾನಿಗಳ ಅಂತಿಮ ದರ್ಶನದ ನಂತರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ

error: Content is protected !!