ಬೆಂಗಳೂರು/ಮಂಡ್ಯ: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ಅವರನ್ನು ನೇಮಕ ಮಾಡಲಾಗಿದೆ. ಗೋಪಾಲಯ್ಯ ಅವರ ಬದಲಿಗೆ ಮಂಡ್ಯ ಜಿಲ್ಲಾ ಉಸ್ತುವಾರಿಯನ್ನು ಅಶೋಕ್ ಹೆಗಲಿಗೆ ಹಾಕಿ ರಾಜ್ಯ ಸರ್ಕಾರ ಇಂದು(ಜನವರಿ 24) ಆದೇಶ ಹೊರಡಿಸಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಂಡ್ಯ ಉಸ್ತುವಾರಿ ನೇಮಕ ತೀವ್ರ ಕುತೂಹಲ ಮೂಡಿಸಿದೆ.
ಹಾಸನ ಜಿಲ್ಲಾ ಉಸ್ತುವಾರಿ ಜೊತೆಗೆ ಮಂಡ್ಯ ಜಿಲ್ಲೆಯನ್ನು ಸಹ ಹೆಚ್ಚುವರಿಯಾಗಿ ಅಬಕಾರಿ ಸಚಿವ ಗೋಪಾಲಯ್ಯ ಅವರಿಗೆ ನೀಡಲಾಗಿತ್ತು. ಆದ್ರೆ, ಇದೀಗ ಚುನಾವಣೆ ಸಂದರ್ಭದಲ್ಲಿ ಬದಲಾವಣೆ ಮಾಡಿ ಮಂಡ್ಯ ಜಿಲ್ಲಾ ಜವಾಬ್ದಾರಿಯನ್ನು ಕಂದಾಯ ಅಶೋಕ್ ನೀಡಲಾಗಿದೆ. ಅಶೋಕ್ ಬೆಂಗಳೂರು ನಗರ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದರು. ಆದ್ರೆ, ಇದೀಗ ಅವರಿಗೆ ಬೆಂಗಳೂರು ಬದಲಿಗೆ ಮಂಡ್ಯ ನೀಡಲಾಗಿದೆ.
ಇನ್ನು ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಕೇಸರಿ ಬಾವುಟ ಹಾರಿಸಲು ಬಿಜೆಪಿ ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರು ಪ್ಲ್ಯಾನ್ ಮಾಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮೊನ್ನೇ ಅಷ್ಟೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ,ಎಲ್. ಸಂತೋಷ್ ಮಂಡ್ಯಕ್ಕೆ ಭೇಟಿ ನೀಡಿ ಟಿಕೆಟ್ ಆಕಾಂಕ್ಷಿ ಹಾಗೂ ಪಕ್ಷದ ಪದಾಧಿಕಾರಿಗಳ ಸಭೆ ಮಾಡಿದ್ದರು. ಈ ವೇಳೆ ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಸ್ಥಾನ ಗೆಲ್ಲಲು ಕೆಲ ಮಹತ್ವದ ಕಾರ್ಯತಂತ್ರಗಳನ್ನ ಹೇಳಿಕೊಟ್ಟಿದ್ದಾರೆ