ಕಲಬುರಗಿ: ತಮ್ಮ ಸರ್ಕಾರ ಬಂದರೆ, ಕಲಬುರಗಿಯಲ್ಲಿ ನಡೆದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡಿಸುತ್ತೇವೆ, ತಪ್ಪಿತಸ್ಥರ ವಿರುದ್ದ ಕ್ರಮ ಗ್ಯಾರಂಟಿ. ಇದು ನಾನು ಕೊಡುತ್ತಿರುವ ಆರನೇ ಗ್ಯಾರಂಟಿ ಎಂದು ಈ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಅದರಂತೆ ಇದೀಗ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕ್ರತಿಕ ಸಂಘದ ಅಕ್ರಮಗಳ ತನಿಖೆಯನ್ನು ಅಧಿಕಾರಿಗಳ ತಂಡ ಆರಂಭಿಸಿದೆ. ಇದರಿಂದ ಭ್ರಷ್ಟಾಚಾರಿಗಳಿಗೆ ನಡುಕ ಶುರುವಾಗಿದೆ.
ಸಾವಿರಾರು ಕೋಟಿ ಹಗರಣ ಆರೋಪ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಬಿಡುಗಡೆ ಮಾಡಿ ವೆಚ್ಚ ಮಾಡಿರುವ 3000 ಕೋಟಿ ರೂ. ಅನುದಾನದಲ್ಲಿ ನಡೆದಿರುವ ವ್ಯಾಪಕ ಅಕ್ರಮಗಳು ಹಾಗೂ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗಾಗಿ ಬಿಡುಗಡೆ ಮಾಡಿ ವೆಚ್ಚ ಮಾಡಲಾಗಿರುವ ರೂ 3.50 ಕೋಟಿ ಅನುದಾನವನ್ನು ಕೆ.ಟಿ.ಪಿ.ಪಿ ಕಾಯ್ದೆಯಡಿ ಪ್ರಕ್ರಿಯೆ ನಡೆಸದೆ ಹೆಚ್ಚುವರಿಯಾಗಿ ರೂ. 50 ಲಕ್ಷ ವೆಚ್ಚ ಮಾಡುವಲ್ಲಿ ನಡೆದ ಅಕ್ರಮ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕ್ರತಿಕ ಸಂಘಕ್ಕೆ ಬಿಡುಗಡೆ ಮಾಡಿ ವೆಚ್ಚ ಮಾಡಿರುವ ರೂ 300 ಕೋಟಿ ಅನುದಾನದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ದೂರುಗಳು ಬಂದ ಹಿನ್ನೆಲೆ ತನಿಖೆ ನಡೆಸಲಾಗುತ್ತಿದೆ.
ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಕೋರಿದ್ದ ಸಚಿವ ಪ್ರಿಯಾಂಕ್ ಖರ್ಗೆ
ಹೌದು ಎಲ್ಲ ದೂರುಗಳು ಕುರಿತಂತೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಕೋರಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ತನಿಖೆಗೆ ಕಳೆದ ಮೇ.29 ರಂದು ತನಿಖೆಗೆ ಆದೇಶಿಸಿದ್ದರು. ಅದರಂತೆ ತನಿಖೆಗಾಗಿ ಯೋಜನಾ ಇಲಾಖೆಯ ಐವರು ಅಧಿಕಾರಿಗಳ ತಂಡವನ್ನು ಸರ್ಕಾರ ರಚಿಸಿದ್ದು, ಅಧಿಕಾರಿಗಳ ತಂಡ ಜೂ.12ರಿಂದ ಕಲಬುರಗಿಯಲ್ಲಿ ಬೀಡು ಬಿಟ್ಟು ತನಿಖೆ ನಡೆಸುತ್ತಿದೆ. ಕೆಕೆಆರ್ಡಿಬಿಯಲ್ಲಿರುವ ದಾಖಲಾತಿಗಳು ಮತ್ತು ಕೈಗೊಂಡ ಕಾಮಗಾರಿಗಳ ಕುರಿತು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಕೆಆರ್ಡಿಬಿಯನ್ನು ತಮ್ಮ ಆದಾಯದ ಕಾಮಧೇನು ಮಾಡಿಕೊಂಡಿದ್ದಾರೆ. ಕಾಮಗಾರಿಗಳಲ್ಲಿ, ಮತ್ತು ಟೆಂಡರ್ಗಳಲ್ಲಿ ಸಾಕಷ್ಟು ಅಕ್ರಮ ನಡೆಸಿದ್ದಾರೆ ಎಂದು ಈ ಹಿಂದೆ ಶಾಸಕರಾಗಿದ್ದ ಪ್ರಿಯಾಂಕ್ ಖರ್ಗೆ ಮೇಲಿಂದ ಮೇಲೆ ಆರೋಪಿಸುತ್ತಲೇ ಇದ್ದರು. ತಮ್ಮ ಸರ್ಕಾರ ಜಾರಿಗೆ ಬಂದ್ರೆ, ಕೆಕೆಆರ್ಡಿಬಿಯಲ್ಲಿ ನಡೆದ ಎಲ್ಲಾ ಭ್ರಷ್ಟಾಚಾರವನ್ನು ತನಿಖೆ ಮಾಡಿಸುತ್ತೇವೆ. ಇದು ಕಲಬುರಗಿ ಜನರಿಗೆ ನಾವು ಕೊಡುತ್ತಿರುವ 6ನೇ ಗ್ಯಾರಂಟಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಇದೀಗ ಪ್ರಿಯಾಂಕ್ ಖರ್ಗೆ ಮನವಿ ಮೇರೆಗೆ ರಾಜ್ಯ ಸರ್ಕಾರದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಮೂರು ದಿನಗಳ ಕಾಲ ತನಿಖೆ ನಡೆಸಲಿರುವ ಅಧಿಕಾರಿಗಳ ತಂಡ, ವರದಿಯನ್ನು ಸರ್ಕಾರಕ್ಕೆ ನೀಡಲಿದೆ. ವರದಿಯಲ್ಲಿ ಯಾವೆಲ್ಲ ಅಕ್ರಮಗಳು ನಡೆದಿವೆ, ಎಷ್ಟು ಮೊತ್ತದ ಅಕ್ರಮ ನಡೆದಿದೆ ಅನ್ನೋದು ಗೊತ್ತಾಗಲಿದ್ದು, ಅಕ್ರಮದಲ್ಲಿ ಭಾಗಿಯಾಗಿರೋ ಕೆಲ ಅಧಿಕಾರಿಗಳಿಗೆ ಈಗಾಗಲೇ ನಡುಕ ಆರಂಭವಾಗಿದೆ. ಹೌದು ಅವರ ವಿರುದ್ದ ಕಠೀಣ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆಯೆಂದು ಹೇಳಲಾಗುತ್ತಿದೆ. ವರದಿ ಬಂದ ನಂತರವೇ ಅಕ್ರಮದ ಅಸಲಿಯತ್ತು ಗೊತ್ತಾಗಲಿದೆ