ಹಾಸನ; ಆ ಟೇಬಲ್ ಮೇಲೆ ಗರಿ ಗರಿ ನೋಟಿನ 10 ಲಕ್ಷ ರೂಪಾಯಿಗಳು, ನೋಟಿನ ಪತ್ರಿಕಾಗೋಷ್ಠಿಯಲ್ಲಿ ಏನು ನಡೆಯುತ್ತಿದೆ ಎಂಬ ಕುತೂಹಲ ಇಂತಹ ಕುತೂಹಲಕ್ಕೆ ಸಾಕ್ಷಿಯಾಗಿದ್ದು ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಹೌದು ಇಂದು ಹಾಸನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಏನು ವಿಶೇಷ ಅಂದರೆ, ಟೇಬಲ್ ಮೇಲೆ 10 ಲಕ್ಷ ರೂಪಾಯಿ ಹಣವನ್ನು ಇಟ್ಟುಕೊಂಡು ಮಾಧ್ಯಮಗಳ ಜೊತೆ ಮಾತನಾಡಿದರು. ಹಾಸನದಲ್ಲಿ ಶುಕ್ರವಾರ ರೇವಣ್ಣ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಜೊತೆ ಪತ್ರಿಕಾಗೋಷ್ಠಿ ನಡೆಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಸಂತೋಷ್ ವಿರುದ್ಧ ಆರೋಪಗಳನ್ನು ಮಾಡಿದರು.ಅದು ಗರಿ ಗರಿ 10 ಲಕ್ಷ ರೂಪಾಯಿಗಳ ಜೊತೆಗೆ….
ಅದಕ್ಕೆ ಕಾರಣ ಅರಸೀಕೆರೆಯ ನಗರಸಭೆ ಸದಸ್ಯರಿಗೆ ಬಿಜೆಪಿ ಸೇರಲು ಸಂತೋಷ್ 10 ಲಕ್ಷ ಹಣದ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದ ರೇವಣ್ಣ, ಅದಕ್ಕಾಗಿಯೇ 10 ಲಕ್ಷ ಹಣವನ್ನು ಪತ್ರಿಕಾಗೋಷ್ಠಿಗೆ ತಂದಿದ್ದರು.”ನಗರಸಭೆ ಸದಸ್ಯರಿಗೆ ಹಣದ ಆಮಿಷವೊಡ್ಡಿದ ಬಗ್ಗೆ ನಾವು ಪೊಲೀಸರಿಗೆ ದೂರು ಕೊಡುತ್ತೇವೆ. ಈ ಬಗ್ಗೆ ಸಿಬಿಐ ತನಿಖೆ ಆಗಬೇಕು. ಸುಪ್ರೀಂಕೋರ್ಟ್ ತನಕ ನಾವು ಹೋಗುತ್ತೇವೆ” ಎಂದು ಎಚ್. ಡಿ. ರೇವಣ್ಣ ಹೇಳಿದರು.”4-5 ತಿಂಗಳಿನಿಂದ ಜೆಡಿಎಸ್ ಸದಸ್ಯರಿಗೆ ಧಮ್ಕಿ ಹಾಕಲಾಗುತ್ತಿದೆ. ಬಿಜೆಪಿ ಸೇರದಿದ್ದರೆ ನಿಮ್ಮನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಇಲ್ಲ, ಅಧಿಕಾರಕ್ಕಾಗಿ ಏನೂ ಬೇಕಾದರೂ ಮಾಡುತ್ತಾರೆ” ಎಂದು ದೂರಿದರು.
ಬಿಜೆಪಿ ಸೇರಲು ಆಮಿಷವೊಡ್ಡಿದ ಬಗ್ಗೆ ತನಿಖೆಯಾಗಬೇಕು. ಅವರ ದೂರವಾಣಿ ಕರೆಗಳ ಮಾಹಿತಿ ಸಂಗ್ರಹ ಮಾಡಬೇಕು. ಇದಕ್ಕೆಲ್ಲಾ ಮುಖ್ಯಮಂತ್ರಿಗಳು ನೇರ ಹೊಣೆ” ಎಂದು ರೇವಣ್ಣ ಆರೋಪಿಸಿದರು. ಅರಸೀಕರೆ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಬಹುದೊಡ್ಡ ಪಕ್ಷ ಹೊರಹೊಮ್ಮಿತ್ತು. ಆದರೆ ಮೀಸಲಾತಿ ಬದಲಾವಣೆ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಜೆಡಿಎಸ್ನ 7 ಸದಸ್ಯರು ಪಕ್ಷ ತೊರೆದು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಅವರಿಗೆಲ್ಲ ಹಣ ನೀಡಲಾಗಿದೆ ಎಂದು ಶಾಸಕ ಶಿವಲಿಂಗೇಗೌಡ ಮತ್ತು ರೇವಣ್ಣ ಆರೋಪಿಸಿದರು.ಒಟ್ಟಾರೆ ಗರಿ ಗರಿ 10 ಲಕ್ಷ ಹಣದೊಂದಿಗೆ ನಡೆದ ಈ ಪತ್ರಿಕಾಗೋಷ್ಠಿ ಕುತೂಹಲ ಮೂಡಿಸಿತ್ತು.