ಸೈನಿಕರು ದೇಶ ಕಾದ್ರೆ, ಪೊಲೀಸರು ಸಮಾಜ ಕಾಯ್ತಾರೆ. ಇಬ್ರು ಸೈನಿಕರೇ. ಆದ್ರೆ, ಎದೆ ಮಟ್ಟದ ಸೈನಿಕ ಮಗನನ್ನ ಕಳೆದುಕೊಂಡ ಆ ಹೆತ್ತವರು ಪೊಲೀಸರ ಬಳಿ ಕೇಳಿದ್ದು ಮೂರೇ ಮೂರು. ಅವನ ಕೊರಳಿದ್ದ ಸರ, ಕೈಯಲ್ಲಿದ್ದ ಉಂಗುರ, ಜೇಬಲ್ಲಿದ್ದ ಹಣವನ್ನಲ್ಲ. ಸ್ವಾಮಿ, ನನ್ನ ಮಗನ ಮೊಬೈಲ್, ವಾಚ್ ಹಾಗೂ ಹೆಲ್ಮೆಟ್ ಕೊಡಿ ಅಂತ ಅಷ್ಟೆ. ಆದ್ರೆ, ಸಮಾಜದ ಕಾಯುವ ಸೈನಿಕರು ನಾವೇನು ಹುಡುಕ್ಕಂಡ್ ಹೋಗಕ್ಕೆ ಆಗುತ್ತೇನ್ರಿ ಅಂತ ಕೈತೊಳೆದುಕೊಂಡಿದ್ದಾರೆ. 22 ವರ್ಷದ ಎನ್.ಎಸ್.ಜಿ. ಬ್ಲ್ಯಾಕ್ ಕ್ಯಾಟ್ ಕಮಾಂಡೋ ಮಗನನ್ನ ಕಳೆದುಕೊಂಡ ಹೆತ್ತವರು ಆ ವಸ್ತುಗಳಿಗಾಗಿ ಕಣ್ಣೀರಿಡ್ತಿದ್ದಾರೆ. ಹಾಗಾದ್ರೆ, ವಾಚ್, ಮೊಬೈಲ್, ಹೆಲ್ಮೆಟ್ ಏಕೆ ಅಂತೀರಾ..ಈ ಸ್ಟೋರಿ ನೋಡಿ
ಹೌದು…. ಈತನ ಹೆಸ್ರು ದೀಪಕ್. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ತಣಿಗೆಬೈಲು ನಿವಾಸಿ. ಎನ್.ಎಸ್.ಜಿ. ಬ್ಲ್ಯಾಕ್ ಕ್ಯಾಟ್ ಕಮಾಂಡೋ. 2018ರಲ್ಲಿ ಸೇನೆಗೆ ಸೇರಿದ ಈತ ನಾಲ್ಕೇ ವರ್ಷಕ್ಕೆ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿದ್ದ. 2020ರಲ್ಲಿ ಮದ್ವೆ ಕೂಡ ಆಗಿತ್ತು. ರಜೆ ಮೇಲೆ ಊರಿಗೆ ಬಂದಿದ್ದ ದೀಪಕ್ ಡ್ಯೂಟಿಗೆ ವಾಪಸ್ ಹೋಗುವಾಗ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರು ಸಮೀಪದ ಹೇಮಾವತಿ ಕ್ರಾಸ್ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು.
ಸೇನೆಯ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಕೂಡ ಮುಗಿದಿದೆ. ಆದರೆ, ಸಾವು ಇಂದಿಗೂ ನಿಗೂಢವಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದರು ಅಂತಾ ಹೇಗೆ ಹೇಳೋದು, ಹಾಗೆಯೇ, ಅಪಘಾತ ಮಾಡಿದ ವಾಹನ ಯಾವುದು ಅನ್ನೋದೂ ನಿಗೂಢವಾಗಿದೆ. ಹಾಗಾಗಿ, ಮೃತ ದೀಪಕ್ ಪೋಷಕರು ನಮ್ಮ ಮಗನೇ ಹೋದ. ಆತನ ಮೈಮೇಲಿದ್ದ ಚಿನ್ನ-ದುಡ್ಡು ಯಾವುದೂ ಬೇಡ. ಆತನ ಮೊಬೈಲ್, ವಾಚ್, ಹೆಲ್ಮೆಟ್ ಕೊಡಿ ಸಾಕು ಎಂದು ಪೊಲೀಸರಿಗೆ ಒಂದೇ ಸಮನೆ ಮನವಿ ಮಾಡ್ತಿದ್ದಾರೆ. ಮೊಬೈಲ್‍ನಲ್ಲಿ ಆರ್ಮಿಯ ಸೀಕ್ರೆಟ್ ಕೋಡ್ ಇದೆ ಎಂದು ಹೇಳುತ್ತಿದ್ದ. ಹೆಲ್ಮೆಟ್‍ನಲ್ಲಿ ಕ್ಯಾಮರಾ ಇದೆ. ಅವನ ಸಾವಿಗೆ ಕಾರಣವಾದರೂ ಗೊತ್ತಾಗಬಹುದು. ದಯವಿಟ್ಟು ಹೆಲ್ಮೆಟ್ ಕೊಡಿ ಎಂದು ಮೃತಯೋಧ ದೀಪಕ್ ಅವರ ತಂದೆ ಕೃಷ್ಣಮೂರ್ತಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದೇ 19ರಂದು ಊರಿಗೆ ಬಂದಿದ್ದ ದೀಪಕ್ ಡ್ಯೂಟಿಗೆ ಹೋಗೋದಕ್ಕೆ 24ನೇ ತಾರೀಖು ಬೆಂಗಳೂರಿಗೆ ಹೋಗುವಾಗ ಬೆಳಗ್ಗೆ 7 ಗಂಟೆ ಸುಮಾರಿಗೆ ಕುಣಿಗಲ್ ತಾಲೂಕಿನ ಹೇಮಾವತಿ ಕ್ರಾಸ್ ಬಳಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದೀಗ, ದೀಪಕ್ ಪೋಷಕರು ಹಣ-ಚಿನ್ನ ಬೇಡ. ಮೊಬೈಲ್‍ನಲ್ಲಿ ಸೇನೆ ಮತ್ತೆ ಇತರೆ ದಾಖಲೆಗಳಿವೆ. ಹೆಲ್ಮೆಟ್‍ನಲ್ಲಿ ಕ್ಯಾಮರಾ ಇದೆ ಕೊಡಿ ಎಂದು ಪೊಲೀಸರಿಗೆ ಅಲವತ್ತುಕೊಂಡಿದ್ದಾರೆ.
ಬೈಕಿಗೆ ಅಪಘಾತ ಮಾಡಿದ ಲಾರಿಯವನು ಮೊಬೈಲ್ ತೆಗೆದುಕೊಂಡು ಹೋಗಿದ್ದಾನೆ. ಮನೆಯವರು ಫೋನ್ ಮಾಡಿದಾಗ ಲಾರಿ ಚಾಲಕನೇ ಅಪಘಾತವಾಗಿದೆ, ಆಸ್ಪತ್ರೆಗೆ ಬನ್ನಿ ಎಂದಿದ್ದಾನೆ. ದೀಪಕ್ ಸ್ನೇಹಿತ ಫೋನ್ ಮಾಡಿದಾಗಲೂ ಲಾರಿ ಗುದ್ದಿದ್ದೇನೆ, ಗಾಬರಿ ಆಯ್ತು, ಅದಕ್ಕೆ ಬಂದುಬಿಟ್ಟೆ, ಆಸ್ಪತ್ರೆಗೆ ಹೋಗಿ ಎಂದು ಚಾಲಕನೇ ಹೇಳಿದ್ದಾನೆ.
ಪೊಲೀಸರು ಫೋನ್ ಮಾಡಿದಾಗಲೂ ನೆಲಮಂಗಲದಲ್ಲಿ ಇದ್ದೇನೆ ಬಂದು ಫೋನ್ ತೆಗೆದುಕೊಂಡು ಹೋಗಿ ಎಂದನಂತೆ. ಪೊಲೀಸರು ಲೊಕೇಶನ್ ಆಧಾರದ ಮೇಲೆ ಅವನನ್ನ ಹಿಡಿಯಬಹುದಿತ್ತು. ಇನ್ನೂ ಹಿಡಿದಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯೋಧರಿಗೂ ಪೊಲೀಸರು ಹೀಗೆ ಮಾಡ್ತಾರಾ? ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.
ಇನ್ನೂ ಆಘಾತಕಾರಿ ಅಂದ್ರೆ ರಸ್ತೆಯಲ್ಲಿ ದಿನಾ ಸಾಯ್ತಾರೆ ನಾವೇನ್ ಮಾಡಕ್ಕೆ ಆಗುತ್ತೆ ಅಂದ್ರಂತೆ ಸಮಾಜ ಕಾಯುವ ಕುಣಿಗಲ್ ಪೊಲೀಸರು. ಪೊಲೀಸರು ಇರೋದೇ ಸಮಾಜದ ಶಾಂತಿ ಕಾಪಾಡೋದಕ್ಕೆ. ನೊಂದವರಿಗೆ ನ್ಯಾಯ ಕೊಡಿಸೋದಕ್ಕೆ. ಆದರೆ, ಓರ್ವ ಯೋಧನ ಸಾವಿಗೂ ಈ ರೀತಿ ಮಾತನಾಡ್ತಾರೆ ಅಂದ್ರೆ ಪೊಲೀಸರು ದೇಶದೊಳಗಿರುವ ಸೈನಿಕರು ಅನ್ನೋದು ತಪ್ಪು ಅನ್ಸತ್ತೆ. ಅದೇನೆ ಇರಲಿ, ಆ ನೊಂದ ಜೀವಗಳು ದುಡ್ಡು, ಚಿನ್ನ ಕೇಳ್ತಿಲ್ಲ. ಮೊಬೈಲ್, ಹೆಲ್ಮೆಟ್ ಅಷ್ಟೆ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಮಗನನ್ನ ಕೊಡೋದಕ್ಕೆ ಆಗಲ್ಲ ನಿಜ. ಆತನ ವಸ್ತುಗಳನ್ನಾದ್ರು ಅವರಿಗೆ ಹಿಂದಿರುಗಿಸಿ, ಆ ಸಾವಿಗೆ ನ್ಯಾಯ ಕೊಡಿಸಬೇಕಿದೆ.